ಬೆಂಗಳೂರು, ಮೇ 1- ಮೈತ್ರಿ ರಾಜಕಾರಣ ಎಂದರೆ ಸಾಕು ಎಲ್ಲಾ ಮುಖಂಡರು ಹಾವು ಕಂಡಂತೆ ಬೆಚ್ಚಿ ಬೀಳುತ್ತಿದ್ದಾರೆ. ತಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿದ್ದೇವೆ ಎಂದು ನಂಬಿಸಲು ಹರಸಾಹಸ ನಡೆಸುತ್ತಿದ್ದು, ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಚುನಾವಣೆಯ ಅಖಾಡದಲ್ಲಿ ಗೆಲುವು ಎಲ್ಲರಿಗೂ ಮುಖ್ಯ. ಗೆಲುವಿಗಾಗಿ ಒಳಗೊಳಗೆ ಎಲ್ಲರೂ ಮೈತ್ರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತಿದೆ. ಆದರೆ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಎಲ್ಲಾ ಪಕ್ಷಗಳು ಹಿಂಜರಿಯುತ್ತಿವೆ.
ಅತ್ಯಾಶ್ಚರ್ಯ ಎಂದರೆ ರಾಜಕೀಯವಾಗಿ ಬದ್ಧ ವೈರಿಗಳಾಗಿರುವ ಬಿಜೆಪಿ-ಕಾಂಗ್ರೆಸ್ ನಡುವೆಯೇ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕೀಯ ನಡೆದಿದೆ. ಪ್ರಮುಖ ನಾಯಕರು ತಮ್ಮ ಬೆಂಬಲಿಗರು, ಸಂಬಂಧಿಕರನ್ನು ಗೆಲ್ಲಿಸಿಕೊಳ್ಳಲು ಅನ್ಯಪಕ್ಷದ ಪ್ರಭಾವಿ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಅಂತಹ ಹೊಂದಾಣಿಕೆಗಳು ಹೆಚ್ಚು ಚರ್ಚೆಯಾಗುತ್ತಿಲ್ಲ.
ಪ್ರಸ್ತುತ ಚುನಾವಣೆಯಲ್ಲಿ ಮೈತ್ರಿ ಎಂಬುದು ಅಲ್ಪಸಂಖ್ಯಾತರ ಒಲೈಕೆಯ ಮೇಲೆ ಹೆಚ್ಚು ಕೇಂದ್ರಿಕೃತವಾಗಿದೆ. ರಾಜ್ಯ ಚುನಾವಣೆಯಲ್ಲಿ ದಲಿತರು, ಅಲ್ಪಸಂಖ್ಯಾತರು ನಿರ್ಣಾಯಕ ಪಾತ್ರ ವಹಿಸಲಿದ್ದು, ಅವರ ನಂಬಿಕೆ ಉಳಿಸಿಕೊಳ್ಳಲು ಎಲ್ಲಾ ಪಕ್ಷಗಳು ಹೆಣಗಾಡುತ್ತಿವೆ.
ಜೆಡಿಎಸ್, ಬಿಎಸ್ಪಿಯ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡು ಬಹಿರಂಗವಾಗಿಯೇ ಜಂಟಿ ಪ್ರಚಾರ ನಡೆಸುತ್ತಿವೆ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯ ಬಲ್ಲ ಹೈದರಾಬಾದ್ ಮೂಲದ ಒವೈಸಿ ಪಕ್ಷ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್ಗೆ ಬೆಂಬಲ ವ್ಯಕ್ತ ಪಡಿಸಿದೆ. ಇದು ಆಡಳಿತಾರೂಢ ಕಾಂಗ್ರೆಸ್ಗೆ ಚಳಿಜ್ವರ ಬರುವಂತೆ ಮಾಡಿದೆ.
ಅದಕ್ಕಾಗಿ ಜನರಿಗೆ ಜೆಡಿಎಸ್ ಬಗ್ಗೆ ಅಪನಂಬಿಕೆ ಬರುವಂತೆ ಮಾಡಲು ಕಾಂಗ್ರೆಸ್ ಮುಖಂಡರು ಲಕ್ಷ್ಮಣ ರೇಖೆಯನ್ನು ದಾಟಿ ಟೀಕೆ ಮಾಡಲಾರಂಭಿಸಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವದ್ಧಂತಿಗಳು ಹಬ್ಬಿದವು. ಇದು ಖುದ್ದು ಸಿದ್ದರಾಮಯ್ಯ ಅವರಿಗೆ ಮುಜುಗರದ ಸಂಗತಿಯಾಗಿತ್ತು. ಕೆಲವು ಕಾಂಗ್ರೆಸ್ ನಾಯಕರು ಹೈಕಮಾಂಡ್ಗೆ ಈ ಬಗ್ಗೆ ಚಾಡಿ ಕೂಡ ಹೇಳಿದ್ದರು. ಆ ಕಾರಣಕ್ಕಾಗಿಯೇ ರಾಹುಲ್ ಗಾಂಧಿ ಹಾಸನದ ಜನಾಶೀರ್ವಾದ ರ್ಯಾಲಿಯಲ್ಲಿ ಜೆಡಿಎಸ್, ಬಿಜೆಪಿಯ ಬಿ ಟೀಂ ಇದ್ದಂತೆ ಎಂಬುದಾಗಿ ನಿಷ್ಠೂರವಾಗಿ ಮಾತನಾಡಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರನೇಯ ದಿನವೇ ಮಂಡ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಕಠಿಣ ಶಬ್ಧಗಳನ್ನು ಬಳಸಿ ಟೀಕೆ ಮಾಡಿದರು. ಇದು ದೇವೇಗೌಡರ ಸಹನೆ ಕೆಡಿಸಿ ತಮ್ಮ ಮಾಜಿ ಶಿಷ್ಯನ ವಿರುದ್ಧ ದೇವೇಗೌಡರು ಕೆಲವು ಟೀಕಾಸ್ತ್ರಗಳನ್ನು ಪ್ರಯೋಗಿಸಿದರು.
ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂಬ ವದಂತಿಗಳನ್ನು ಹಬ್ಬಿಸಿದರೆ ಒವೈಸಿ ಮತ್ತು ಬಿಎಸ್ಪಿ ಬೆಂಬಲದಿಂದ ಜೆಡಿಎಸ್ಗೆ ಆಗುವ ಲಾಭವನ್ನು ತಪ್ಪಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಅದಕ್ಕೆ ಪೂರಕವಾಗಿ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಎಲ್ಲಿಯೂ ಟೀಕೆ ಮಾಡಿಕೊಳ್ಳದೆ ಎರಡು ಪಕ್ಷಗಳ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದಿದ್ದಾರೆ.
ಬಿಜೆಪಿಗೆ ಕೋಮುವಾದಿ ಮತ್ತು ಸಂವಿಧಾನ ವಿರೋಧಿ ಎಂಬ ಪಟ್ಟ ಕಟ್ಟಿ ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಜೆಡಿಎಸ್ ಚುನಾವಣೆ ಪೂರ್ವದಲ್ಲೂ ಮೈತ್ರಿ ಮಾಡಿಕೊಂಡಿದ್ದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಪ್ರಚಾರ ಮಾಡಲಾಗಿದೆ. ಚುನಾವಣೆ ನಂತರವೂ ಜೆಡಿಎಸ್, ಬಿಜೆಪಿ ಜತೆ ಕೈ ಜೋಡಿಸಲಿದೆ ಎಂಬ ವದಂತಿಯನ್ನು ಹರಿಯ ಬಿಡಲಾಗಿದೆ. ಈ ಮೂಲಕ ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ.
ಕಾಂಗ್ರೆಸ್ನ ಒಳ ಮರ್ಮ ಅರಿತ ಜೆಡಿಎಸ್ ತಾನು ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಲು ಹರಸಾಹಸ ಮಾಡುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಅತ್ಯಂತ ಗಂಭೀರ ಪರಿಣಾಮ ಬೀರುತ್ತವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸದೆ ಇದ್ದರೆ ಅದರಿಂದಾಗುವ ಹಾನಿ ಅಪಾರವಾಗಿರುತ್ತದೆ.
ಇನ್ನು ಬಿಜೆಪಿ ಯಾವ ಮೈತ್ರಿಗಳನ್ನು ತಳ್ಳಿ ಹಾಕದೆ ಜಾಣ ಮೌನಕ್ಕೆ ಶರಣಾಗಿದೆ. ಬಿಜೆಪಿಯ ನಿಲುವುಗಳು ಸ್ಪಷ್ಟವಾಗಿದ್ದು, ತನ್ನ ವೋಟ್ ಬ್ಯಾಂಕ್ನ್ನು ಕಾಯ್ದುಕೊಂಡರೆ ಸಾಕು, ಆಯಾ ಕ್ಷೇತ್ರದ ಅಭ್ಯರ್ಥಿಗಳನ್ನು ಆಧರಿಸಿ ಬರುವ ಜಾತ್ಯತೀತ ಮತಗಳು ಪಕ್ಷವನ್ನು ಗೆಲ್ಲಿಸುತ್ತವೆ ಎಂಬ ನಂಬಿಕೆಯಲ್ಲಿ ಬಿಜೆಪಿಯಿದೆ.
ಕಾಂಗ್ರೆಸ್ ಈ ಬಾರಿ ಇತರೆ ಯಾವ ಪಕ್ಷಗಳ ಜೊತೆಯೂ ಬಹಿರಂಗವಾಗಿ ಹೊಂದಾಣಿಕೆ ಮಾಡಿಕೊಳ್ಳದೆ ತನ್ನ ಪಾಡಿಗೆ ತಾನ್ನಿದ್ದಂತೆ ತೋರಿಸಿಕೊಳ್ಳುತ್ತಿದೆ.
ಆದರೆ, ಚುನಾವಣೆಯಲ್ಲಿ ಗೆಲ್ಲಲು ಈ ಮೂರು ಪ್ರಮುಖ ಪಕ್ಷಗಳು ಅಧಿಕೃತವಾಗಿ ಅಲ್ಲದಿದ್ದರೂ ಅನಧಿಕೃತವಾಗಿ ಪರಸ್ಪರ ಕೈ ಜೋಡಿಸಿರುವುದು ಸಾಮಾನ್ಯವಾಗಿದೆ. ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಕ್ಷೇತ್ರ ಮಟ್ಟದಲ್ಲಿ ಹಿರಿಯ ನಾಯಕರ ಜತೆ ಹೊಂದಾಣಿಕೆ ಮಾಡಿಕೊಂಡು ಡಮ್ಮಿ ಅಭ್ಯರ್ಥಿಗಳನ್ನು ಹಾಕಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ.
ಈ ವಾಸ್ತವಾಂಶವನ್ನು ಅರಿಯದ ಅಮಾಯಕ ಕಾರ್ಯಕರ್ತರು ಜಿದ್ದಾಜಿದ್ದಿಗೆ ಬಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲವೆಡೆ ಹೊಡೆದಾಟಗಳು ನಡೆದಿವೆ. ಕೋಲಾರ ಜಿಲ್ಲೆಯ ಗೌರಿಬಿದನೂರು ಕ್ಷೇತ್ರದಲ್ಲಿ ಸಂಘರ್ಷವಾಗಿ ಒಬ್ಬರ ಕೊಲೆಯೂ ನಡೆದು ಹೋಗಿದೆ.
ರಾಜಕೀಯದಲ್ಲಿ ಯಾರು ಮಿತ್ರರಲ್ಲ, ಯಾರು ಶತೃವೂ ಅಲ್ಲ ಎಂಬ ಮಾತಿದೆ. ಉನ್ನತ ನಾಯಕರು ಚುನಾವಣೆ ಕಾಲದಲ್ಲಿ ವೈರಿಗಳಾದರೆ ಚುನಾವಣೆ ನಂತರ ಮಿತ್ರರಾಗಿರುತ್ತಾರೆ. ಕೆಳ ಹಂತದ ಕಾರ್ಯಕರ್ತರು ಈ ಸತ್ಯವನ್ನು ಅರಿತು ಬಾವೋದ್ವೇಗವಿಲ್ಲದೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ನಡೆಸಿದರೆ ಸಮಾಜಕ್ಕೂ ಒಳ್ಳೆಯದು.