ನವದೆಹಲಿ, ಮೇ 1-ಕೇಂದ್ರ ಸರ್ಕಾರವು ಏಪ್ರಿಲ್ ಮಾಹೆಯಲ್ಲಿ 1.03 ಲಕ್ಷ ಕೋಟಿ ರೂ.ಗಳ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಆದಾಯ ಸಂಗ್ರಹವಾಗಿದೆ. ಇದರೊಂದಿಗೆ ಕಳೆದ ವರ್ಷ ಜುಲೈನಲ್ಲಿ ದೇಶಾದ್ಯಂತ ಜಾರಿಗೆ ಬಂದ ಏಕರೂಪದ ಹೊರ ಪರೋಕ್ಷ ತೆರಿಗೆಯಲ್ಲಿ ಸ್ಥಿರತೆಯನ್ನು ಸೂಚಿಸುತ್ತದೆ.
ಮಾರ್ಚ್ನಲ್ಲಿ ಜಿಎಸ್ಟಿ ವರಮಾನ ಕ್ರೋಢೀಕರಣ 89,264 ಕೋಟಿ ರೂ.ಗಳಷ್ಟಿತ್ತು. 2017-18ರಲ್ಲಿ ಒಟ್ಟು ಸಂಗ್ರಹ 7.41 ಲಕ್ಷ ಕೋಟಿ ರೂ.ಗಳಷ್ಟಿದೆ.
ಏಪ್ರಿಲ್ನಲ್ಲಿ ಒಟ್ಟು ಜಿಎಸ್ಟಿ ಆದಾಯ 1,03,458 ಕೋಟಿ ರೂ.ಗಳಾಗಿದೆ. ಇದರಲ್ಲಿ ಸಿಜಿಎಸ್ಟಿ 18,652 ಕೋಟಿ ರೂ.ಗಳು. ಎಸ್ಜಿಎಸ್ಟಿ 25,704 ಕೋಟಿ ರೂ.ಗಳು, ಐಜಿಎಸ್ಟಿ 50,548 ಕೋಟಿ ರೂ.ಗಳು(ಆಮದು ಮೇಲೆ ಸಂಗ್ರಹವಾದ 21,246 ಕೋಟಿ ರೂ.ಗಳೂ ಸೇರಿ), ಸುಂಕ 8,554 ಕೋಟಿ ರೂ.ಗಳು(ಆಮದುಗಳ ಮೇಲೆ ಸಂಗ್ರಹವಾದ 702) ಕೋಟಿ ರೂ.ಗಳೂ ಸೇರಿ) ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಇಷ್ಟು ಪ್ರಮಾಣದ ಜಿಎಸ್ಟಿ ಆದಾಯ ಕ್ರೋಢೀಕರಣವಾಗಿರುವುದು ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರಗತಿಯ ಪ್ರಗತಿಯನ್ನು ಬಿಂಬಿಸುತ್ತದೆ ಎಂದು ಸಚಿವಾಲಯ ವಿವರಿಸಿದೆ.