ಬೆಂಗಳೂರು, ಮೇ 1- ಬೆಂಗಳೂರಿಗೆ ಗುಳೇ ಬಂದಿರುವ ವಿವಿಧ ಜಿಲ್ಲೆಗಳ ಜನರನ್ನು ಚುನಾವಣೆಗೆ ಕರೆದೊಯ್ಯಲು ರಾಜಕಾರಣಿಗಳು ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
ಈಗಾಗಲೇ ಬಸ್, ಲಾರಿಗಳನ್ನು ಬುಕ್ ಮಾಡಿದ್ದಾರೆ. ರಾಯಚೂರು, ಗುಲ್ಬರ್ಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಕೊಪ್ಪಳ ಮುಂತಾದ ಜಿಲ್ಲೆಗಳಿಂದ ಉದ್ಯೋಗ ಅರಸಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರನ್ನು ತಮ್ಮ ತಮ್ಮ ಊರುಗಳಲ್ಲಿ ಮತದಾನ ಮಾಡಿಸಲು ಕರೆದೊಯ್ಯಲು ಆಯಾಯ ಜಿಲ್ಲೆಯ ಅಭ್ಯರ್ಥಿಗಳ ಬೆಂಬಲಿಗರು ಈಗಾಗಲೇ ವ್ಯವಸ್ಥೆಯನ್ನು ಮಾಡಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆ ಮೇ 12ರಂದು ನಡೆಯಲಿದ್ದು, ಅದಕ್ಕೆ ಎರಡು-ಮೂರು ದಿನ ಮುಂಚೆ ತೆರಳಲು ಕೆಎಸ್ಆರ್ಟಿಸಿ ಹಾಗೂ ವಿವಿಧ ಖಾಸಗಿ ಬಸ್, ಟೆಂಪೆÇೀ, ಲಗೇಜ್ ವಾಹನಗಳನ್ನು ಬುಕ್ ಮಾಡಿದ್ದಾರೆ.
ರಾಯಚೂರು, ಗುಲ್ಬರ್ಗ, ಬಳ್ಳಾರಿ ಕಡೆಯಿಂದ ಬಂದು ನೆಲೆಸಿರುವವರು ಹೆಚ್ಚಾಗಿದ್ದಾರೆ. ಕಟ್ಟಡ ನಿರ್ಮಾಣ, ಬಿಬಿಎಂಪಿ ಗುತ್ತಿಗೆ ಕಾಮಗಾರಿಗಳಲ್ಲಿ ಹೆಚ್ಚು ತೊಡಗಿಸಿಕೊಂಡವರು ಇದ್ದಾರೆ. ಮೇಸ್ತ್ರಿಗಳ ಮೂಲಕ ಅವರ ಎಲ್ಲ ಮಾಹಿತಿ ಕಲೆ ಹಾಕಿರುವ ವಿವಿಧ ರಾಜಕಾರಣಿಗಳ ಬೆಂಬಲಿಗರು ಅವರನ್ನೆಲ್ಲ ಅವರವರ ಊರಿಗೆ ಕರೆದೊಯ್ದು ಮತ ಹಾಕಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ವಾಹನಗಳ ಕೊರತೆ ಎದುರಾಗಬಹುದು ಎಂಬ ಹಿನ್ನೆಲೆಯಲ್ಲಿ ಮೊದಲೇ ನೂರಾರು ವಾಹನಗಳನ್ನು ಬುಕ್ ಮಾಡಿ ಇಟ್ಟುಕೊಂಡಿದ್ದಾರೆ. ನಗರದ ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿನಗರ, ದಾಸರಹಳ್ಳಿ, ಎಚ್ಎಎಲ್, ಇಂದಿರಾನಗರ, ಯಶವಂತಪುರ, ಯಲಹಂಕ, ಶಿವಾಜಿನಗರ, ಮೆಜೆಸ್ಟಿಕ್ ಸೇರಿದಂತೆ ನಗರದ ಬಹುತೇಕ ಕಡೆ ಇವರು ತಾತ್ಕಾಲಿಕ ಶೆಡ್ಗಳಲ್ಲಿ ವಾಸವಾಗಿದ್ದಾರೆ.
ಇವರನ್ನೆಲ್ಲ ಕರೆದೊಯ್ದು ಮತ ಹಾಕಿಸಿ ಮತ್ತೆ ವಾಪಸ್ ಕರೆತಂದು ಬಿಡುವ ಜವಾಬ್ದಾರಿಯನ್ನು ವಿವಿಧ ಏಜೆಂಟರುಗಳಿಗೆ ರಾಜಕಾರಣಿಗಳು ವಹಿಸಿದ್ದಾರೆ. ಈ ಎಲ್ಲರ ಬಳಿ ಬಹುತೇಕ ಅವರ ಚುನಾವಣಾ ಗುರುತಿನ ಚೀಟಿ ಇದೆ. ಕೆಲವರು ಇಲ್ಲಿನ ಗುರುತಿನ ಚೀಟಿ ಪಡೆದು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇನ್ನೂ ಹಲವರು ತಮ್ಮ ಸ್ವಂತ ಊರಿನ ಸಂಪರ್ಕದಲ್ಲಿದ್ದಾರೆ. ಅಂತಹವರ ಮಾಹಿತಿಯ ಜಾಡು ಹಿಡಿದಿರುವ ರಾಜಕಾರಣಿಗಳು ಅವರನ್ನು ಊರಿಗೆ ಕರೆದೊಯ್ದು ಮತ ಹಾಕಿಸಲು ಪ್ರಯತ್ನ ಮುಂದುವರಿಸಿದ್ದಾರೆ.
ಅವರನ್ನು ಊರಿಗೆ ಕರೆದೊಯ್ಯುವ, ಕರೆದು ತರುವ ಖರ್ಚು-ವೆಚ್ಚದ ಜವಾಬ್ದಾರಿ ಹಾಗೂ ಅವರಿಗೆ ಇಂತಿಷ್ಟು ಹಣ ನೀಡುವುದು ಕೂಡ ನಿಗದಿಯಾಗಿದೆ.
ಚುನಾವಣಾ ಸಂದರ್ಭದಲ್ಲಿ ಊರಿಗೆ ಹೋಗಲು ಇವರು ಕೂಡ ಆಸಕ್ತಿ ಹೊಂದಿರುತ್ತಾರೆ. ಇವರನ್ನು ಕರೆದೊಯ್ಯುವವರ ಜತೆ ಇವರು ತೆರಳಿ ತಮಗೆ ತೋಚಿದವರಿಗೆ ಮತ ಹಾಕಿ ಬರುತ್ತಾರೆ.
ಚುನಾವಣಾ ಆಯೋಗ ಚುನಾವಣಾ ಕೆಲಸಕ್ಕೆ ಎಲ್ಲ ಸರ್ಕಾರಿ, ಖಾಸಗಿ ಬಸ್ಗಳನ್ನು ಬುಕ್ ಮಾಡಿಕೊಳ್ಳುತ್ತದೆ. ಇವರು ಲಾರಿ, ಟೆಂಪೆÇೀಗಳಲ್ಲಾದರೂ ಹೋಗಿ ಮತದಾನ ಮಾಡಿ ಬರುತ್ತಾರೆ. ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ಇವರಿಗೆ ವಾಹನಗಳ ತೊಂದರೆಯಾಗಬಹುದು. ಅದಕ್ಕೆ ಒಂದು ವಾರ ಮುಂಚೆಯೇ ರೈಲು, ಇನ್ನಿತರ ವಾಹನಗಳಲ್ಲಿ ಕರೆದೊಯ್ಯುವ ವ್ಯವಸ್ಥೆಯನ್ನು ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ಮಾಡಿದ್ದಾರೆ.
ಶನಿವಾರ ರಜೆ ದಿನ. ಅದರ ಹಿಂದಿನ ಎರಡು-ಮೂರು ದಿನ ಮುಂಚೆಯೇ ಇವರನ್ನು ಊರಿಗೆ ಕರೆದೊಯ್ಯುತ್ತಾರೆ.
ಒಟ್ಟಾರೆ, ಗುಳೆ ಬಂದವರಿಗೆ ಊರಿಗೆ ಹೋಗಿ ಬರಲು ಚುನಾವಣಾ ಚಾನ್ಸ್….