ಬೆಂಗಳೂರು,ಮೇ1- ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೇವಲ 6 ಕಡೆ ಮಾತ್ರ ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ ಬಳಕೆಗೆ ಅನುಮತಿ ಪಡೆದುಕೊಂಡಿದ್ದರೆ, ಪ್ರತಿಪಕ್ಷ ಬಿಜೆಪಿ 39 ಹಾಗೂ ಜೆಡಿಎಸ್ 13 ಕಡೆಗಳಲ್ಲಿ ಅನುಮತಿ ಪಡೆದುಕೊಂಡಿವೆ.
ವಿಧಾನಸಭಾ ಚುನಾವಣಾ ಪ್ರಚಾರ ಮತ್ತು ಓಡಾಟಕ್ಕಾಗಿ ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ಗಳ ಬಳಕೆಗಾಗಿ ಆನ್ಲೈನ್ ಮೂಲಕ ವಿವಿಧ ರಾಜಕೀಯ ಪಕ್ಷಗಳು ಒಟ್ಟು 64 ಕಡೆಗಳಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಿವೆ.
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್ಸೈಟ್ನಲ್ಲಿರುವ ¾ಸುವಿಧಾ¿ದ ಮೂಲಕ ವಿವಿಧ ರಾಜಕೀಯ ಪಕ್ಷಗಳು ಆನ್ಲೈನ್ ಮೂಲಕ ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ಗಳ ಬಳಕೆಗಾಗಿ ಸಲ್ಲಿಸಿದ್ದ 64 ಅರ್ಜಿಗಳ ಪೈಕಿ 58 ಕ್ಕೆ ಅನುಮತಿ ನೀಡಲಾಗಿದ್ದು, ಮೂರು ಕೋರಿಕೆಗಳನ್ನು ತಿರಸ್ಕರಿಸಲಾಗಿದೆ. ಇನ್ನುಳಿದ 3 ಪ್ರಕರಣಗಳು ವಿವಿಧ ಹಂತದಲ್ಲಿವೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷವು (ಬಿಜೆಪಿ) ಒಟ್ಟು 39 ಕಡೆಗಳಲ್ಲಿ ಅನುಮತಿ ಪಡೆದುಕೊಂಡಿದೆ. ಎರಡು ಕಡೆಗಳಲ್ಲಿ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿದೆ. ಕಾಂಗ್ರೆಸ್ 6 ಕಡೆಗಳಲ್ಲಿ ಮತ್ತು ಜೆಡಿಎಸ್ 13 ಕಡೆಗಳಲ್ಲಿ ಹೆಲಿಕಾಪ್ಟರ್ ಮತ್ತು ಹೆಲಿಪ್ಯಾಡ್ಗಳ ಬಳಕೆಗಾಗಿ ಅನುಮತಿ ಪಡೆದುಕೊಂಡಿವೆ. ಪಕ್ಷೇತರ ಅಭ್ಯರ್ಥಿಯೊಬ್ಬರ ಕೋರಿಕೆಯನ್ನು ತಿರಸ್ಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.