ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕುಟುಂಬಕ್ಕೆ ಮತ್ತೆ ಸಂಕಷ್ಟ: ಶಾರದಾ ಚಿಟ್‍ಫಂಡ್ ಹಗರಣ ಸಂಬಂಧ ನಳಿನಿ ಚಿದಂಬರಂಗೆ ಇಡಿ ಸಮನ್ಸ್

ನವದೆಹಲಿ, ಮೇ 1-ಕಾಂಗ್ರೆಸ್ ಹಿರಿಯ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕುಟುಂಬಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಪಶ್ಚಿಮ ಬಂಗಾಳದ ಶಾರದಾ ಚಿಟ್‍ಫಂಡ್ ಹಗರಣ ಸಂಬಂಧ ಚಿದಂಬರಂ ಪತ್ನಿ ನಳಿನಿ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ಜಾರಿಗೊಳಿಸಿದೆ.

ಬಹುಕೋಟಿ ರೂ.ಗಳ ಏರ್‍ಸೆಲ್-ಮಾಕ್ಸಿಸ್ ಹಗರಣದಲ್ಲಿ ಚಿದು ಪುತ್ರ ಮತ್ತು ಉದ್ಯಮಿ ಕಾರ್ತಿ ಚಿದಂಬರಂ ಇಡಿ ಬಲೆಗೆ ಸಿಲುಕಿರುವಾಗಲೇ ಈಗ ನಳಿನಿ ಅವರಿಗೂ ಕಂಟಕ ಎದುರಾಗಿದೆ.
ಕೋಟ್ಯಂತರ ರೂ.ಗಳ ಶಾರದಾ ಚಿಟ್‍ಫಂಡ್ ಹಗರಣದಲ್ಲಿ ನಳಿನಿ ಚಿದಂಬರಂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಮೇ 7ರಂದು ಕೋಲ್ಕತ್ತಾದ ಕಚೇರಿಯಲ್ಲಿ ವಿಚಾರಣಗೆ ಹಾಜರಾಗುವಂತೆ ನಳಿನಿ ಅವರಿಗೆ ಇಡಿ ಸಮನ್ಸ್ ರವಾನಿಸಿದ್ದು, ಮುಂದಿನ ಬೆಳವಣಿಗೆ ಕುತೂಹಲಕಾರಿಯಾಗಿದೆ.

ಇದಕ್ಕೂ ಮುನ್ನ ಚಿದಂಬರಂ ಪತ್ನಿ ಇಡಿ ಸಮನ್ಸ್ ಪ್ರಶ್ನಸಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಕಳೆದ ವಾರ ನ್ಯಾಯಾಲಯವು ನಳಿನಿ ಅರ್ಜಿಯನ್ನು ವಜಾಗೊಳಿಸಿತ್ತು.
ಹಿರಿಯ ವಕೀಲರೂ ಆಗಿರುವ ನಳಿನಿ ಅವರಿಗೆ ಶಾರದಾ ಗ್ರೂಪ್ 1.26 ಕೋಟಿ ರೂ. ಕಾನೂನು ಸಂಭಾವನೆ ಪಾವತಿಸಿದೆ ಎಂಬ ಆರೋಪವಿದೆ. ಈ ಹಿಂದೆ 2016ರ ಸೆಪ್ಟೆಂಬರ್‍ನಲ್ಲಿ ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ ನಳಿನಿ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ