ವಿಜಯಪುರ, ಏ.30- ಅನಂತ್ಕುಮಾರ್ ಸೇರಿದಂತೆ ಇತರರು ಯಡಿಯೂರಪ್ಪ ಅವರ ಮಗನಿಗೆ ವರುಣಾ ಕ್ಷೇತ್ರದ ಟಿಕೆಟ್ ತಪ್ಪಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರನಿಗೆ ವರುಣಾ ಕ್ಷೇತ್ರದ ಟಿಕೆಟ್ ಕೈ ತಪ್ಪಲು ಯಾರು ಕಾರಣ ಎಂಬುದು ಬಹಿರಂಗವಾಗಿದೆ. ಅಲ್ಲಿನ ಜನರು ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೈನ ಧರ್ಮದವರಾಗಿದ್ದು, ತಾವು ಹಿಂದೂ ಎಂದು ಹೇಳುತ್ತಾರೆ. ಬಿಜೆಪಿಯವರು ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಕೆಣಕಿದರು.
ಬಿಜೆಪಿ, ಜೆಡಿಎಸ್ ಇಬ್ಬರೂ ಆಡಳಿತಕ್ಕೆ ಬರುವುದಿಲ್ಲ. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಅನಂತ್ಕುಮಾರ್ ಹೆಗಡೆಗೆ ಸಂಸ್ಕøತಿ ಇಲ್ಲ, ಮನುಷ್ಯತ್ವವೂ ಇಲ್ಲ. ಅವರ ಬಗ್ಗೆ ಮಾತನಾಡದೆ ಇರುವುದೇ ಲೇಸು ಎಂದು ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಚಾಮುಂಡೇಶ್ವರಿಯಲ್ಲಿ ನಾನು ಐದು ಬಾರಿ ಗೆದ್ದಿದ್ದೇನೆ. ಆರನೆ ಬಾರಿಯೂ ಗೆಲುವು ಸಾಧಿಸುತ್ತೇನೆ. ನಾನು ಚಾಮುಂಡೇಶ್ವರಿಯಲ್ಲಿ ಗೆಲ್ಲುವುದಿಲ್ಲ ಎಂದು ಅಮಿತ್ ಷಾ ಹೇಳಿದ್ದಾರೆ. ಐದು ಬಾರಿ ಗೆದ್ದಾಗ ಅಮಿತ್ ಷಾ ಬಂದಿದ್ದರಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆದ್ದರೆ ನಾನೇ ಸಿಎಂ ಆಗುತ್ತೇನೆ ಎಂದು ಹೇಳಕ್ಕೆ ಆಗಲ್ಲ. ಆದರೆ, ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ನಾನೇ ಸಿಎಂ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಒಂದು ವಿಷಯವೇ ಅಲ್ಲ. ಬಿಜೆಪಿಯವರು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಅವರಿಗೆ ಬೇರೆ ಕೆಲಸ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮವೊಂದರಲ್ಲಿ ನನಗೆ ಮರಾಠಿ ಭಾಷೆ ಬರುವುದಿಲ್ಲ, ಕ್ಷಮಿಸಿ ಎಂದು ಹೇಳಿದ್ದೆ. ಅದರಲ್ಲೇನು ತಪ್ಪು ಎಂದು ತಮ್ಮ ಹೇಳಿಕೆಯನ್ನು ಸಿಎಂ ಸಮರ್ಥಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕೈದು ಬಾರಿ ನಮ್ಮ ರಾಜ್ಯಕ್ಕೆ ಪ್ರವಾಸ ಬಂದು ಹೋಗಿದ್ದಾರೆ. ಏನೂ ಪರಿಣಾಮ ಬೀರಿಲ್ಲ. ಈಗ ಬಂದರೂ ಏನೂ ಪರಿಣಾಮ ಬೀರುವುದಿಲ್ಲ. ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಪುನರುಚ್ಚರಿಸಿದರು.