ನಾಳೆ ಜೆಡಿಎಸ್ ಪರ ಅಸಾದುದ್ದೀನ್ ಓವೈಸಿ ಚುನಾವಣಾ ಪ್ರಚಾರ

ಬೆಂಗಳೂರು,ಏ.30- ಎಐಎಂಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸತ್ ಸದಸ್ಯರಾದ ಅಸಾದುದ್ದೀನ್ ಓವೈಸಿ ನಾಳೆ ಜೆಡಿಎಸ್ ಪರವಾಗಿ ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರಿನ ಚಿಕ್ಕಪೇಟೆ, ಪುಲಿಕೇಶಿನಗರ, ಸರ್ವಜ್ಞನಗರ ಹಾಗೂ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಇಡೀ ದಿನ ಚುನಾವಣಾ ಪ್ರಚಾರದಲ್ಲಿ ಓವೈಸಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಎಐಎಂಐ ಪಕ್ಷ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಬದಲಾಗಿ ಜೆಡಿಎಸ್‍ಗೆ ಬೆಂಬಲ ಸೂಚಿಸಿದ್ದು, ಈಗ ಚುನಾವಣಾ ಪ್ರಚಾರದಲ್ಲೂ ಪಾಲ್ಗೊಂಡಿದೆ.
ಈ ಹಿಂದೆ ಜೆಡಿಎಸ್‍ಗೆ ಬೆಂಬಲ ಕೊಡುವುದಾಗಿ ಓವೈಸಿ ಹೇಳಿದ್ದಲ್ಲದೆ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿಯೂ ತಿಳಿಸಿದ್ದರು. ಅದರಂತೆ ನಾಳೆ ಬೆಳಗ್ಗೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಹೇಮಚಂದ್ರ ಸಾಗರ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ನಂತರ ಪುಲಿಕೇಶಿನಗರದ ಜೆಡಿಎಸ್ ಅಭ್ಯರ್ಥಿ ಬಿ.ಪ್ರಸನ್ನಕುಮಾರ್, ಸರ್ವಜ್ಞನಗರದ ಅಭ್ಯರ್ಥಿ ಅನ್ವರ್ ಷರೀಫ್ ಹಾಗೂ ಚಾಮರಾಜಪೇಟೆ ಅಭ್ಯರ್ಥಿ ಬಿ.ಕೆ.ಅಲ್ತಾಫ್ ಖಾನ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಬಿಎಸ್‍ಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಜಂಟಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ. ಬಿಎಸ್‍ಪಿ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮೈಸೂರು ಹಾಗೂ ಚಿತ್ರದುರ್ಗದಲ್ಲಿ ನಡೆದ ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸಿ ಜೆಡಿಎಸ್ ಹಾಗೂ ಬಿಎಸ್‍ಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು.
ಓವೈಸಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದರಿಂದ ಜೆಡಿಎಸ್‍ಗೆ ಬಲ ಹೆಚ್ಚಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ