ಮೈಸೂರು, ಏ.29- ಬೇಲ್ ಮೇಲೆ ಹೊರಗಿರುವ ಅಮ್ಮ, ಮಗನಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ದೂರಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟಾಚಾರಿಗಳೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ, ಬೇಲ್ ಮೇಲೆ ಹೊರಗಿರುವ ಅಮ್ಮ-ಮಗನಿಂದ ಭ್ರಷ್ಟಾಚಾರದ ಬಗ್ಗೆ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಅವರು ಮೇ 1ರಿಂದ 8ವರೆಗೆ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೇ 1ರಂದು ಚಾಮರಾಜನಗರ ಸಂತೇಮರಳಿಹಳ್ಳಿಯಲ್ಲಿ ಬೆಳಗ್ಗೆ 11 ಗಂಟೆಗೆ ಚುನಾವಣೆ ಪ್ರಚಾರ ನಡೆಸಲಿದ್ದಾರೆ. ನಂತರ ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಒಂದು ಲಕ್ಷ ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದ್ದು , ಈ ಸಭೆಯಲ್ಲಿ 20ಕ್ಕೂ ಹೆಚ್ಚು ಮಂದಿ ಬಿಜೆಪಿ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನಂತರ 3 ಗಂಟೆಗೆ ಉಡುಪಿ, 6 ಗಂಟೆಗೆ ಚಿಕ್ಕೋಡಿಯಲ್ಲಿ ಪ್ರಧಾನಿ ಪ್ರಚಾರ ಭಾಷಣ ನಡೆಸಲಿದ್ದಾರೆ ಎಂದರು.
ಮೇ 3ರಂದು ಗುಲ್ಬರ್ಗ, 5ರಂದು ತುಮಕೂರು, 7ರಂದು ರಾಯಚೂರು, 8ರಂದು ಬಿಜಾಪುರ ಹಾಗೂ ಬೆಂಗಳೂರಿನಲ್ಲಿ ಮೋದಿ ಪ್ರಚಾರ ಭಾಷಣ ನಡೆಸಲಿದ್ದಾರೆ ಎಂದರು.
ವಿಜಯೇಂದ್ರ ಅವರಿಗೆ ಟಿಕೆಟ್ ನೀಡದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ವಿಚಾರ ಮುಗಿದ ಅಧ್ಯಾಯ. ಯಡಿಯೂರಪ್ಪನವರು ಕೇವಲ ಪ್ರಚಾರಕ್ಕಾಗಿ ಮಾತ್ರ ವಿಜಯೇಂದ್ರರನ್ನು ಇಲ್ಲಿಗೆ ಕಳುಹಿಸಿದ್ದು ಆದರೆ ಅಭ್ಯರ್ಥಿಯನ್ನಾಗಿ ಅಲ್ಲ. ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.