ನವದೆಹಲಿ, ಏ.29-ದೇಶ ಮಹಾನಗರಗಳಲ್ಲಿ ಕಾರುಗಳ ಮಾರಾಟದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಕಿರಿಕಿರಿಯಾಗುವ ಟ್ರಾಫಿಕ್ ಜಾಮ್, ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟನೆ, ಪಾರ್ಕಿಂಗ್ ಸಮಸ್ಯೆ, ಆಫ್ ಆಧರಿತ ಕ್ಯಾಬ್ ಸೌಲಭ್ಯ, ಅತಿವೇಗದ ಮೆಟ್ರೋ ರೈಲುಗಳ ಸಂಪರ್ಕ ಜಾಲ ಮೊದಲಾದ ಕಾರಣಗಳಿಂದ ಬೃಹತ್ ನಗರಗಳಲ್ಲಿ ಕಾರುಗಳ ಮಾರಾಟ ಕುಗ್ಗಲು ಆರಂಭಿಸಿದೆ.
ಮುಂಬೈ, ಬೆಂಗಳೂರು, ಚೆನ್ನೈ, ದೆಹಲಿ, ಮತ್ತು ಪುಣೆ ಮಹಾನಗರಗಳಲ್ಲಿ 2017-18ನೇ ಸಾಲಿನಲ್ಲಿ ಕಾರುಗಳ ಮಾರಾಟದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
ಈ ಅವಧಿಯಲ್ಲಿ ಮುಂಬೈನಲ್ಲಿ 97,274 ಕಾರುಗಳು ಮಾರಾಟವಾಗಿವೆ. ಇದಕ್ಕೂ ಹಿಂದಿನ ವರ್ಷದಲ್ಲಿ 1.22 ಲಕ್ಷ ಕಾರುಗಳು ಬಿಕರಿಯಾಗಿದ್ದವು. ಇದರಿಂದಾಗಿ ಶೇ.20.4ರಷ್ಟು ಮಾರಾಟ ಕುಂಠಿತವಾಗಿದೆ. ದೇಶದಲ್ಲಿ ಕಾರುಗಳಿಗೆ ಭಾರೀ ಬೇಡಿಕೆ ಹೊಂದಿರುವ ದೇಶದ ಎರಡನೇ ನಗರವಾದ ಬೆಂಗಳೂರಿನಲ್ಲೂ ಶೇ.11.2ರಷ್ಟು ಕಾರುಗಳ ಮಾರಾಟ ಇಳಿಮುಖವಾಗಿದೆ. ಇದೇ ಅವಧಿಯಲ್ಲಿ ಚೆನ್ನೈನಲ್ಲಿ 4.5ರಷ್ಟು ಮಾರಾಟ ತಗ್ಗಿದೆ.
ದೆಹಲಿ ಮತ್ತು ಪುಣೆ ಸೇರಿದಂತೆ ದೇಶಾದ್ಯಂತ ಕಾರು ಮಾರಾಟದಲ್ಲಿ ಶೇ.10ರಷ್ಟು ವೃದ್ದಿ ಕಂಡುಬಂದಿದೆಯಾದರೂ, ಮೆಟ್ರೊ ನಗರಗಳಲ್ಲಿ ಮಾರಾಟ ಇಳಿಮುಖವಾಗಿರುವುದು ಗಮನಾರ್ಹ.
ಸಂಚಾರ ಒತ್ತಡ, ಪಾರ್ಕಿಂಗ್ ಸಮಸ್ಯೆ, ಓಲಾ ಮತ್ತು ಊಬರ್‍ನಂಥ ಆ್ಯಪ್ ಆಧರಿತ ಕ್ಯಾಬ್ ಸೇವೆ, ಟ್ರಾಫಿಕ್ ಜಾಮ್ ಕಿರಿಕಿರಿ ತಪ್ಪಿಸುವ ಅತಿವೇಗದ ಮೆಟ್ರೋ ರೈಲುಗಳ ಸಂಪರ್ಕ-ಈ ಎಲ್ಲ ಕಾರಣಗಳಿಂದ ಕಾರು ಮಾರಾಟದಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ಉಂಟಾಗಲು ಕಾರಣ ಎಂಬುದನ್ನು ಟೊಯೊಟೋ ಕಿರ್ಲೋಸ್ಕರ್ ಮತ್ತು ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯ ಉನ್ನತಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.