ಪಕ್ಷದೊಳಗಿನ ಆಂತರಿಕ ಕಚ್ಚಾಟಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಬೆಂಗಳೂರು, ಏ.27- ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವ ಸಂದರ್ಭದಲ್ಲಿ ಪಕ್ಷದೊಳಗಿನ ಆಂತರಿಕ ಕಚ್ಚಾಟಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ತಡರಾತ್ರಿ ನಗರಕ್ಕೆ ಆಗಮಿಸಿದ ಅಮಿತ್ ಷಾ ರಾಜ್ಯ ಉಸ್ತುವಾರಿ ಮುರಳೀಧರ ರಾವ್ , ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ , ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಕೆಲವೇ ನಾಯಕರ ಜತೆ ಮಾತುಕತೆ ನಡೆಸಿ ಪಕ್ಷದಲ್ಲಿ ನqಯುತ್ತಿರುವ ಬೆಳವಣಿಗೆಗಳ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರಗೆ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಮೇಲೆ ಉಂಟಾಗಿರುವ ಬೆಳವಣಿಗೆಗಳಿಂದ ಪಕ್ಷಕ್ಕೆ ಹಾನಿಯಾಗಿದೆ ಎಂಬುದನ್ನು ರಾಜ್ಯ ನಾಯಕರ ಗಮನಕ್ಕೆ ಷಾ ತಂದಿದ್ದಾರೆ.

ಯಾವ ಕಾರಣಕ್ಕಾಗಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿತು ಎಂಬುದು ಈಗ ಅಪ್ರಸ್ತುತ. ಯಾರು ಟಿಕೆಟ್ ತಪ್ಪಿಸಿದರೂ ಎಂಬುದು ಕೂಡ ಅನಗತ್ಯ. ನಾಯಕರೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಹೀಗೆ ಚುನಾವಣಾ ಸಂದರ್ಭದಲ್ಲಿ ಮುನಿಸಿಕೊಂಡರೆ ನಾವು ಅಧಿಕಾರಕ್ಕೆ ಬರುವುದು ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಹಿರಿಯರಾದ ಯಡಿಯೂರಪ್ಪ ಮತ್ತು ಅನಂತಕುಮಾರ್ ಹೊಂದಿಕೊಂಡು ಹೋಗಬೇಕು. ನೀವಿಬ್ಬರೂ ಸಹೋದರರಂತೆ ಒಗ್ಗಟ್ಟಾಗಿದ್ದರೆ ಕಾರ್ಯಕರ್ತರಿಗೆ ಹುರುಪು ಬರುತ್ತದೆ. ನಿಮ್ಮ ನಿಮ್ಮಲ್ಲೇ ಕಚ್ಚಾಟ ಮಾಡಿದರೆ ಪಕ್ಷವನ್ನು ಮುನ್ನಡೆಸುವುದು ಹೇಗೆ ಎಂದು ಅಮಿತ್ ಷಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ನqಯುತ್ತಿರುವ ಬೆಳವಣಿಗೆಗಳು ನಮಗೆ ತೃಪ್ತಿಕರವಾಗಿಲ್ಲ. ಎಷ್ಟೇ ಪ್ರಯತ್ನಿಸಿದರೂ ಕೆಲವರು ಸುಧಾರಿಸುವುದಿಲ್ಲ. ಇಂತಹ ಬೆಳವಣಿಗೆಗಳು ಯಾವ ಪಕ್ಷಕ್ಕೂ ಒಳ್ಳೆಯದಲ್ಲ. ನೀವು ಎಷ್ಟೇ ದೊಡ್ಡವರಾಗಿದ್ದರೂ ಸರಿ ಪಕ್ಷಕ್ಕೆ ಅತೀಥರಲ್ಲ ಎಂಬುದನ್ನು ಸಲಹೆ ಮಾಡಿದ್ದಾರೆ.

ಬಳ್ಳಾರಿ ಪ್ರವಾಸ ರದ್ದು: ಇನ್ನು ಅಮಿತ್ ಷಾ ಇಂದು ಬಳ್ಳಾರಿಗೆ ತೆರಳಬೇಕಿತ್ತು. ನಿಗದಿತ ಕಾರ್ಯಕ್ರಮದಂತೆ ಬಳ್ಳಾರಿಯಲ್ಲಿ ರೋಡ್ ಷೋ, ಪಕ್ಷದ ಸಂಘಟನೆ ಕುರಿತು ಪ್ರಮುಖರ ಜತೆ ಚರ್ಚೆ , ಬಹಿರಂಗ ಸಭೆ, ದುಗ್ಗಾಲಮ್ಮ ದೇವಸ್ಥಾನಕ್ಕೆ ಭೇಟಿ ಕಾರ್ಯಕ್ರಮಗಳು ನಿಗದಿಯಾಗಿದ್ದವು. ಆದರೆ ಇದ್ದಕ್ಕಿದ್ದಂತೆ ಅವರು ಬಳ್ಳಾರಿ ಪ್ರವಾಸವನ್ನು ಕೈ ಬಿಟ್ಟು ಕೊಪ್ಪಳಕ್ಕೆ ತೆರಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ