ಬೆಂಗಳೂರು, ಏ.26-ಕರ್ನಾಟಕದಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗಿದೆ. ಹೊರಗಡೆಯಿಂದ ಬಂದು ನೆಲೆಸಿರುವವರೇ ಚುನಾವಣೆಗೆ ಸ್ಪರ್ಧಿಸಿದ್ದಾರೆ. ನಾಡಿನ ಬಗ್ಗೆ ಹಿತಾಸಕ್ತಿ, ಕಾಳಜಿ ಇರುವವರು ಶಾಸನಸಭೆಗೆ ಬರುತ್ತಿಲ್ಲ ಎಂದು ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಷಾದ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠೀಯಲ್ಲಿಂದು ಮಾತನಾಡಿದ ಅವರು, ಜೈಲಿಗೆ ಹೋದವರು, ಜೈಲಿಗೆ ಹೋಗಲು ಸಿದ್ಧವಾಗಿರುವವರು ಶಾಸನಸಭೆಗೆ ಬರುತ್ತಿರುವುದು ಅತ್ಯಂತ ಆತಂಕದ ವಿಷಯವಾಗಿದೆ. ನಾಡಿನ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದವರು ಶಾಸನಸಭೆಗೆ ಬರುತ್ತಿದ್ದಾರೆ. ಇದರಿಂದ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲದಂತಾಗುತ್ತಿದೆ ಎಂದು ಹೇಳಿದರು.
ರಾಜಧಾನಿ ಕನ್ನಡಿಗರ ಕೈಯಲ್ಲಿಲ್ಲ. ವಲಸಿಗರಿಗೆ ಇಲ್ಲಿ ಹೆಚ್ಚಾಗಿದ್ದಾರೆ, ತಮಿಳು, ತೆಲುಗು, ರಾಜಸ್ಥಾನಿ, ಗುಜರಾತಿಗಳ ಪ್ರಭಾವ ಹೆಚ್ಚಾಗಿದೆ. ಹೊರಗಿನಿಂದ ಬಂದವರು ಇಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಮಠಾಧಿಪತಿಗಳನ್ನು ಭೇಟಿ ಮಾಡುವುದು, ಕಾವಿ ಧರಿಸುವುದು, ಕಂಬಳಿ ಧರಿಸುವುದು, ಹಲವು ಗಿಮಿಕ್ಗಳನ್ನು ಮಾಡುತ್ತಿರುವುದು ತೀವ್ರಗೊಂಡಿದೆ ಎಂದು ವಾಟಾಳ್ ಟೀಕಿಸಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ನಾನು ಸ್ಪರ್ಧಿಸಿದ್ದು, ಈ ಬಾರಿ ಅಲ್ಲಿಂದ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಈ ಹಿಂದೆ ಸೋಲುಂಟಾಗಿತ್ತು. ಈ ಬಾರಿ ಅಲ್ಲಿನ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ 5 ದಶಕಗಳಿಂದ ನಾಡುನುಡಿ, ನೆಲ,ಜಲ, ಸಂಸ್ಕøತಿ ಉಳಿವಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ಕೊನೆಯುಸಿರುವವರೆಗೂ ಹೋರಾಟ ಮಾಡುತ್ತೇನೆ. ಇಲ್ಲಿನ ಜನ ನನ್ನನ್ನು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.