ನವದೆಹಲಿ, ಏ.26-ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಕಮಲ್ನಾಥ್ ನೇಮಕಗೊಂಡಿದ್ದು, ಇಂದು ಅಧಿಕೃತ ಘೋಷಣೆಯಾಗಲಿದೆ. ರಾಜ್ಯ ಘಟಕದ ಅಧ್ಯಕ್ಷರಾಗಲು ಯುವ ನಾಯಕ ಮತ್ತು ಲೋಕಸಭೆಯ ಪಕ್ಷದ ಮುಖ್ಯ ಸಚೇತಕ ಜ್ಯೋತಿರಾದಿತ್ಯ ಸಿಂದಿಯಾ ತೀವ್ರ ಯತ್ನಗಳನ್ನೂ ನಡೆಸಿದ್ದರೂ, ಕೊನೆ ಕ್ಷಣದಲ್ಲಿ ಕಮಲ್ನಾಥ್ ಅವರನ್ನು ಪಕ್ಷದ ಹೈಕಮಾಂಡ್ ನೇಮಕ ಮಾಡಿದೆ.
ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಪಾಟೀಲ್ ಚೌಹಾಣ್ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಪಕ್ಷ ಬಲವರ್ಧನೆ ಕಾಂಗ್ರೆಸ್ ಈಗಿನಿಂದಲೇ ಪೂರ್ಣಪ್ರಮಾಣದ ಸಿದ್ದತೆ ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಘಟಕವನ್ನು ಪುನಾರ್ರಚನೆ ಮಾಡಲು ವರಿಷ್ಠ ಮಂಡಳಿ ನಿರ್ಧಾರ ಕೈಗೊಂಡಿದ್ದು, ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಶಮನಕ್ಕೆ ಕ್ರಮ ಕೈಗೊಂಡಿದೆ. ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಿದೆ. ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಸಮನ್ವಯ ಸಮತಿ ಅಧ್ಯಕ್ಷರಾಗಲಿದ್ದಾರೆ.
ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಕಾನೂನು ತಜ್ಞ ವಿವೇಕ್ ಟಂಖಾ ಅವರು ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದು, ಹಿಂದುಳಿದ ವರ್ಗಗಳ ಮುಖಂಡ ಮತ್ತು ಪಿಸಿಸಿ ಅಧ್ಯಕ್ಷ ಅರ್ಜುನ್ ಯಾದವ್ ಅವರಿಗೆ ಜವಾಬ್ದಾರಿಯುತ ಸೂಕ್ತ ಹುದ್ದೆ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ಧಾರೆ.
ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷವನ್ನು ಈಗಿನಿಂದಲೇ ಬೇರುಮಟ್ಟದಲ್ಲಿ ಬಲಗೊಳಿಸಿ ಸಂಘಟನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ವರಿಷ್ಠರು ಶ್ರಮಿಸುತ್ತಿದ್ದಾರೆ.