ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 50 ಕ್ಷೇತ್ರಗಳಲ್ಲೂ ಗೆಲ್ಲದೆ ಹೀನಾಯವಾಗಿ ಸೋಲಲಿದೆ : ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‍ಜಾವ್ಡೇಕರ್ ಭವಿಷ್ಯ

ಬೆಂಗಳೂರು,ಏ.26- ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 50 ಕ್ಷೇತ್ರಗಳಲ್ಲೂ ಗೆಲ್ಲದೆ ಹೀನಾಯವಾಗಿ ಸೋಲಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‍ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ.
ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಈ ಬಾರಿ ಗೆಲ್ಲುವುದಿಲ್ಲ . ಮೇ 15ರಂದು ಫಲಿತಾಂಶ ಬಂದಾಗ ಕಾಂಗ್ರೆಸ್‍ಗೆ ಹತಾಶೆ ಕಟ್ಟಿಟ್ಟ ಬುತ್ತಿ ಎಂದು ಲೇವಡಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ನಾನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದೆ. ನಾಮಪತ್ರ ಸಲ್ಲಿಕೆಯಾದ ನಂತರವೂ ಆ ಪಕ್ಷದ ಸ್ಥಿತಿ ನೋಡಿದರೆ ಚುನಾವಣೆಗೂ ಮುನ್ನವೇ ಸೋಲು ಒಪ್ಪಿಕೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅತಂತ್ರ ಫಲಿತಾಂಶ ನಿರ್ಮಾಣವಾಗುವುದಿಲ್ಲ. ಕರ್ನಾಟಕದ ಜನತೆ ಬುದ್ಧಿವಂತರಾಗಿದ್ದು, ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಲಿದ್ದಾರೆ. ಜನರ ನಾಡಿಮಿಡತ ಹೇಗೆ ಎಂಬುದನ್ನು ತಿಳಿದಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂದು ಹೇಳಿದರು.
ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯವರು ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳ ಜೊತೆ ಸಂವಾದ ನಡೆಸಿದ್ದಾರೆ. ಇದರಿಂದ ಕಾರ್ಯಕರ್ತರ ಆತ್ಮಸ್ಥೈರ್ಯ ಇಮ್ಮಡಿಗೊಂಡಿದೆ. ಇನ್ನಷ್ಟು ಆತ್ಮವಿಶ್ವಾಸದಿಂದ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದು ನುಡಿದರು.

ಯಾವುದೇ ಪ್ರಧಾನಿ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ನಿದರ್ಶನಗಳಿಲ್ಲ. ನಮ್ಮ ಪ್ರಧಾನಿಯವರು ತಾವು ಪ್ರಧಾನಿ ಎಂಬುದನ್ನು ಮರೆತು ಮಾತನಾಡಿದ್ದಾರೆ. ಇದನ್ನು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.

ರೈತರ ಸಮಸ್ಯೆಗಳು, ಬೆಂಗಳೂರು ನಗರ ಎದುರಿಸುತ್ತಿರುವ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಪ್ರಚಲಿತ ಸಮಸ್ಯೆಗಳ ಬಗ್ಗೆ ಪ್ರಧಾನಿಯವರು ಮುಕ್ತವಾಗಿ ಮಾತನಾಡಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ.

ಇದು ಮತದಾರರ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ. ಈ ಮೂಲಕ ಪ್ರಧಾನಿಯವರ ಜನಸಾಮಾನ್ಯರ ಹೃದಯ ಗೆದ್ದಿದ್ದಾರೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಯುವ ನಾಯಕರು ಬಹಿರಂಗಪಡಿಸಲು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದರು.
ರೈತರಿಗಾಗಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬುದನ್ನು ರಾಹುಲ್ ಗಾಂಧಿ ಬಹಿರಂಗಪಡಿಸಬೇಕು. ನಿನ್ನೆ ನಮ್ಮ ಸಚಿವರಾದ ಅನಂತಕುಮಾರ್ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ಆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರೆ ನಾವು ನಿಮ್ಮ ಪ್ರಶ್ನೆಗೂ ಉತ್ತರ ನೀಡುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ