ಚೆನ್ನೈ:ಏ-26: ಪೊಲೀಸ್ ಪೇದೆಯೊಬ್ಬರು ಪ್ರಾಣದ ಹಂಗು ತೊರೆದು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿ, ಅತ್ಯಾಚಾರದಿಂದ ಮಹಿಳೆಯನ್ನು ರಕ್ಷಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಚೆನ್ನೈನ ಪಾರ್ಕ್ ಟೌನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರೈಲ್ವೆ ರಕ್ಷಣಾ ಪಡೆ(ಆರ್ಪಿಎಫ್)ಯ ಶಿವಾಜಿ ಎಂಬ ಪೇದೆ, ರಾತ್ರಿ ಗಸ್ತು ಕರ್ತವ್ಯಕ್ಕಾಗಿ ವೆಲಚೇರಿಯಿಂದ ಚೆನ್ನೈ ಬೀಚ್ಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. 11.45ರ ಸುಮಾರಿಗೆ ಚಿಂತಾದ್ರಿಪೇಟ್ ನಿಲ್ದಾಣದಿಂದ ರೈಲು ಹೊರಟ ಬೆನ್ನಿಗೇ ಪಕ್ಕದ ಮಹಿಳಾ ಬೋಗಿಯಿಂದ ಚೀರಾಟ ಕೇಳಿಬಂದಿತ್ತು.
ದೂರ ಪ್ರಯಾಣದ ರೈಲುಗಳಲ್ಲಿರುವಂತೆ ಈ ರೈಲಿನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಒಳಗಿನಿಂದಲೇ ಸಾಗುವ ವ್ಯವಸ್ಥೆಯಿರಲಿಲ್ಲ. ಹೀಗಾಗಿ ಶಿವಾಜಿ ಮುಂದಿನ ನಿಲುಗಡೆಯಾದ ಪಾರ್ಕ್ ಟೌನ್ಗೆ ಮೊದಲು ರೈಲು ನಿಧಾನ ಗೊಳ್ಳುವುದನ್ನೇ ಕಾಯುತ್ತಿದ್ದರು. ರೈಲು ಪಾರ್ಕ್ ಟೌನ್ ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ ರೈಲು ನಿಧಾನವಾಯಿತು. ಕೂಡಲೇ ಬೋಗಿಯಿಂದ ಪ್ಲಾಟ್ಫಾರ್ಮ್ಗೆ ಹಾರಿದ ಶಿವಾಜಿ ಮಿಂಚಿನ ವೇಗದಲ್ಲಿ ಓಡಿ ಮಹಿಳಾ ಬೋಗಿಯನ್ನು ಪ್ರವೇಶಿಸಿದ್ದರು. ಅಲ್ಲಿ 25ರ ಯುವಕ ಮಹಿಳೆಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸುತ್ತಿದ್ದ. ತಕ್ಷಣ ಆತನನ್ನು ದೂರಕ್ಕೆ ತಳ್ಳಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ವೇಳೆ ರೈಲು ನಿಂತಿದ್ದು, ಮತ್ತೊಂದು ಬೋಗಿಯಲ್ಲಿದ್ದ ಆರ್ ಪಿಎಫ್ ಪೊಲೀಸರಾದ ಎಸ್ಐ ಎಸ್.ಸುಬ್ಬಯ್ಯ ಮತ್ತೋರ್ವ ಕಾನ್ ಸ್ಟೇಬಲ್ ಪಾತಕಿಯನ್ನು ಹಿಡಿದು ಥಳಿಸಿದ್ದಾರೆ. ಅಲ್ಲದೆ ಇತರೆ ಪೊಲೀಸರೂ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ವೇಳೆ ಬೋಗಿಯಲ್ಲಿದ್ದ ಮಹಿಳೆ ಆರೋಪಿಯ ದಾಳಿಯಿಂದ ಪ್ರಜ್ಞಾಶೂನ್ಯಳಾಗಿದ್ದು, ತುಟಿಗಳಿಂದ ರಕ್ತ ವಸರುತ್ತಿತ್ತು,ಬಟ್ಟೆಗಳು ಹರಿದಿದ್ದವು. ಪೊಲೀಸರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು,ಚಿಕಿತ್ಸೆಯ ಬಳಿಕ ಆಕೆ ಚೇತರಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಪೊಲೀಸ್ ತನಿಖೆ ವೇಳೆ ಸಂತ್ರಸ್ಥ ಮಹಿಳೆ ವೆಲಾಚೆರಿಯಿಂದ ತಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದರಂತೆ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಮಹಿಳೆ ಅಂದು ಒಬ್ಬರೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಗಮನಿಸಿದ್ದ ದುಷ್ಕರ್ಮಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೀಗ ಆರ್ ಪಿಎಫ್ ಪೇದೆ ಶಿವಾಜಿ ಸಾಹಸ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಿಸಿದ ಶಿವಾಜಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರೈಲ್ವೇ ಪೊಲೀಸ್ ಇಲಾಖೆ ಕೂಡ ಶಿವಾಜಿ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಇಲಾಖೆಯು ಶಿವಾಜಿ ಮತ್ತವರ ತಂಡಕ್ಕೆ 5 ಸಾವಿರ ನಗದು ಬಹುಮಾನವನ್ನು ಘೋಷಿಸಿದೆ.
Chennai cop jumps out,moving train to change coach, prevents rape bid on woman