ಬೆಂಗಳೂರು, ಏ.26-ಮಾಜಿ ಪ್ರಧಾನಿ ದೇವೇಗೌಡರು, ಬಿಎಸ್ಪಿ ನಾಯಕಿ ಮಾಯಾವತಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವು ಘಟಾನುಘಟಿಗಳು ಇಂದು ರಾಜ್ಯ ವಿಧಾನಸಭೆ ಚುನಾವಣೆಯ ಕಣದಲ್ಲಿ ಪ್ರಚಾರದ ಕಹಳೆ ಮೊಳಗಿಸಿದರು.
ಮೂರೂ ಪಕ್ಷದ ಘಟಾನುಘಟಿಗಳು ಇಂದು ರಾಜ್ಯದಲ್ಲಿ ಪ್ರವಾಸ ನಡೆಸಿ ಚುನಾವಣಾ ಪ್ರಚಾರಕ್ಕೆ ಹೊಸ ರಂಗು ತಂದರು.
ಚಿತ್ರದುರ್ಗದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಜಂಟಿಯಾಗಿ ಪ್ರಚಾರ ನಡೆಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ-ಧಾರವಾಡ, ಹೊನ್ನಾವರದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಳ್ಳಾರಿ, ಚಿತ್ರದುರ್ಗ ಮತ್ತು ಕೋಲಾರದಲ್ಲಿ ಅಬ್ಬರದ ಪ್ರಚಾರ, ರೋಡ್ಶೋ ನಡೆಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಅವರು, ಇಂದಿನಿಂದ ಎರಡು ದಿನಗಳ ಕಾಲ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ. ಅಂಕೋಲಾದಲ್ಲಿ ಸಾರ್ವಜನಿಕ ಸಭೆ, ಕಾಮತ್ ಹೋಟೇಲ್ ರಸ್ತೆಯಲ್ಲಿ ರೋಡ್ಶೋ ನಡೆಸಲಿದ್ದಾರೆ. ಮಧ್ಯಾಹ್ನ ಕುಮಟಾದಲ್ಲಿ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಭಾಷಣ ಮಾಡುವ ಅವರು, ಕುಮಟಾದ ಮಾಸ್ತಿ ಕಟ್ಟೆ ವೃತ್ತದಿಂದ ಹಿಲ್ಸ್ ಹೈಸ್ಕೂಲ್ ವೃತ್ತದವರೆಗೂ ರೋಡ್ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 5 ರಿಂದ 7 ಗಂಟೆಯವರೆಗೆ ಉತ್ತರ ಕನ್ನಡದ ಭಟ್ಕಳದಲ್ಲಿ ಕಾರ್ನರ್ ಮೀಟಿಂಗ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ನಾಳೆ ಕೊನೆಯ ದಿನಾಂಕವಾಗಿದ್ದು, ಬಂಡಾಯವಾಗಿ ಸಲ್ಲಿಸಿರುವವರನ್ನು ನಾಮಪತ್ರ ಹಿಂತೆಗೆಸುವ ಪ್ರಯತ್ನ ಮುಂದುವರೆದಿದ್ದು, ಇನ್ನುಳಿದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ.
ಹಳ್ಳಿಹಳ್ಳಿಗಳಲ್ಲಿ, ಗಲ್ಲಿಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಎಲ್ಲಿ ನೋಡಿದರೂ ಚುನಾವಣೆಯದ್ದೇ ಅಬ್ಬರ. ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಪ್ರತಿ ಗ್ರಾಮಗಳ ಮುಖಂಡರ ಭೇಟಿ, ಸಮುದಾಯದ ನಾಯಕರೊಂದಿಗೆ ಚರ್ಚೆ, ದೇವಾಲಯ, ಮಂದಿರ, ಮಸೀದಿಗಳಲ್ಲಿ ಸಭೆ, ಸಮಾರಂಭಗಳನ್ನು ನಡೆಸುವ ಮೂಲಕ ಮತಯಾಚನೆ ನಡೆಯುತ್ತಿದೆ.
ಈ ನಡುವೆ ಮತದಾರರ ಮನವೊಲಿಸಲು ಹಲವು ಆಮಿಷಗಳನ್ನು ಒಡ್ಡಲಾಗುತ್ತಿದೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳ ನಡುವೆಯೇ ಆಯೋಗದ ಕಣ್ಣು ತಪ್ಪಿಸಿ ವಿವಿಧ ಆಮಿಷಗಳನ್ನೊಡ್ಡಿ ಮತದಾರರನ್ನು ತನ್ನತ್ತ ಸೆಳೆಯಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಸರತ್ತು ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಪಕ್ಷಗಳಲ್ಲಿ ಬಹುತೇಕ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಪಕ್ಷದ ಅಭ್ಯರ್ಥಿಗಳ ನಾಯಕರು ಪ್ರಚಾರ ನಡೆಸಿದರೆ, ಅವರ ಬೆಂಬಲಿಗರು ಪ್ರತಿ ಮನೆ ಮನೆಗೂ ತೆರಳಿ ಕರಪತ್ರಗಳನ್ನು ಹಂಚಿ ಮತಯಾಚನೆ ಮಾಡುತ್ತಿದ್ದಾರೆ.
ಸರ್ಕಾರ ತನ್ನ ಸಾಧನೆಗಳನ್ನು ಬಿಂಬಿಸಿ ಮತಯಾಚನೆ ಮಾಡಿದರೆ, ಪ್ರತಿಪಕ್ಷಗಳವರು ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿವೆ. ವಿವಿಧೆಡೆ ಸಭೆ-ಸಮಾರಂಭಗಳನ್ನು ಏರ್ಪಡಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಜಾತಿಗಳ ಸಮಾವೇಶ, ಸಮುದಾಯಗಳ ಸಮಾವೇಶ, ಸಂಘ ಸಂಸ್ಥೆಗಳೊಂದಿಗೆ ಸಮಾಲೋಚನೆ ಒಟ್ಟಾರೆ ಎಲ್ಲಾ ಮೂಲಗಳನ್ನು ಬಳಸಿಕೊಂಡು ಮತ ಪಡೆಯುವ ಯತ್ನವನ್ನು ರಾಜಕೀಯಪಕ್ಷಗಳ ಅಭ್ಯರ್ಥಿಗಳು ಮಾಡುತ್ತಿದ್ದಾರೆ.
ಕೆಲವೆಡೆ ಪಕ್ಷೇತರರು ತಾವೇನು ಕಡಿಮೆ ಎಂಬಂತೆ ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆಯೋಗ ಎಷ್ಟೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ಕುರುಡು ಕಾಂಚಾಣ ಧಾರಳವಾಗಿ ಹರಿದಾಡುತ್ತಿದೆ. ದುಡ್ಡಿಲ್ಲದೆ ಯಾವುದೇ ಚುನಾವಣೆ ನಡೆಯುವುದಿಲ್ಲ. ಪ್ರಚಾರ ಕಾರ್ಯಕ್ಕೆ ಜನರು ಬರುವುದಿಲ್ಲ. ಪ್ರತಿದಿನ ಪ್ರತಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ಬರಬೇಕು. ಅವರಿಗೆ ಊಟ, ತಿಂಡಿ, ಕರಪತ್ರಗಳು, ವಾಹನ ಸೇರಿದಂತೆ ಲಕ್ಷಾಂತರ ರೂ. ಖರ್ಚಾಗುತ್ತದೆ. ಎಲ್ಲವನ್ನು ಆಯೋಗದ ಕಣ್ತಪ್ಪಿಸಿಯೇ ಅಭ್ಯರ್ಥಿಗಳು ಮಾಡುತ್ತಾರೆ.
ಒಟ್ಟಾರೆ ಚುನಾವಣೆ ಪ್ರಚಾರದ ಭರಾಟೆ ಜೋರಾಗಿಯೇ ಸಾಗಿದೆ.
ಬೆಂಗಳೂರು, ಮಂಗಳೂರು, ಬಿಸಿಲ ನಾಡು ಬಳ್ಳಾರಿ, ಮಧ್ಯಕರ್ನಾಟಕ, ಉತ್ತರಕರ್ನಾಟಕ, ಮುಂಬೈ ಕರ್ನಾಟಕ, ಹಳೇ ಮೈಸೂರು ಪ್ರಾಂತ್ಯ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲಾ ಕಡೆ ಪ್ರಚಾರದ ಅಬ್ಬರ ಜೋರಾಗಿದೆ.
ಅಭ್ಯರ್ಥಿಗಳು ತಮ್ಮ ಸಾಮಥ್ರ್ಯವನ್ನು ಓರಗೆ ಹಚ್ಚಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಮಹಿಳೆಯರ, ಯುವಕರ ಮತ ಸೆಳೆಯಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ. ಹಾಲಿ ಶಾಸಕರು ತಾವು ಕೈಗೊಂಡ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಪ್ರಚಾರ ಮಾಡುತ್ತಿದ್ದರೆ, ಆ ಕ್ಷೇತ್ರದ ಇತರೆ ಅಭ್ಯರ್ಥಿಗಳು ತಮ್ಮ ಭವಿಷ್ಯದ ಯೋಜನೆಗಳನ್ನು ಜನರ ಮುಂದಿಟ್ಟು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ಚುನಾವಣಾ ಪ್ರಚಾರ ಕಣ ರಂಗೇರತೊಡಗಿದೆ.