ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ನಾವು ಪ್ರಚಾರಕ್ಕೆ ಕರೆದಿಲ್ಲ – ಬಿಜೆಪಿ ವಕ್ತಾರ ಡಾ.ವಾಮಾನಾಚಾರ್ಯ

ಹುಬ್ಬಳ್ಳಿ, ಏ.25-ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ನಾವು ಪ್ರಚಾರಕ್ಕೆ ಕರೆದಿಲ್ಲ. ಅವರು ನಮ್ಮ ಸ್ಟಾರ್ ಪ್ರಚಾರಕರೂ ಅಲ್ಲ ಎಂದು ಬಿಜೆಪಿ ವಕ್ತಾರ ಡಾ.ವಾಮಾನಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನರೆಡ್ಡಿ ಪ್ರಚಾರ ಮಾಡುವುದರಿಂದ ನಮ್ಮ ಪಕ್ಷಕ್ಕೆ ಆನೆ ಬಲ ಬಂದಿದೆ ಎಂಬುದಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಎಲ್ಲೂ ಹೇಳಿಲ್ಲ ಎಂದು ತಿಳಿಸಿದರು.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ನಮ್ಮ ಪಕ್ಷದ ನಾಯಕರು. ಜನಾರ್ಧನರೆಡ್ಡಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ರಾಜ್ಯಸರ್ಕಾರ ಅದನ್ನು ಸದ್ಭಳಕೆ ಮಾಡಿಕೊಂಡಿಲ್ಲ ಎಂದು ದೂರಿದರು. ಪ್ರತಿಯೊಂದು ಜಿಲ್ಲೆಯಲ್ಲಿ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆ ಕಟ್ಟುತ್ತೇವೆಂದು ಕಾಂಗ್ರೆಸ್ ಸರ್ಕಾರ ಹೇಳಿತ್ತು. ಆದರೆ 5 ಜಿಲ್ಲೆಗಳಲ್ಲಿ ಮಾತ್ರ ಈ ಕೆಲಸ ಆಗಿದೆ. ಕಳೆದ ಐದು ವರ್ಷಗಳಿಂದ ಯಾವುದೇ ಪ್ರಗತಿಯನ್ನು ಮಾಡದೆ ಕೇವಲ ರಾಜಕೀಯ ಮಾಡಿದ್ದಾರೆ ಎಂದು ಡಾ.ವಾಮಾನಚಾರ್ಯ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ