ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮದೇ ಕ್ಷೇತ್ರದಲ್ಲಿ ನಿಂತು ಗೆದ್ದು ಬರುವ ವಿಶ್ವಾಸವಿಲ್ಲ – ಜಗದೀಶ್‍ಶೆಟ್ಟರ್

ಹುಬ್ಬಳ್ಳಿ, ಏ.25-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮದೇ ಕ್ಷೇತ್ರದಲ್ಲಿ ನಿಂತು ಗೆದ್ದು ಬರುವ ವಿಶ್ವಾಸವಿಲ್ಲ. ಇಂತಹ ದುರ್ಬಲ ಸಿಎಂ ಅನ್ನು ನಾನು ಈವರೆಗೆ ನೋಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‍ಶೆಟ್ಟರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಮಣಿದು ಬಾದಾಮಿಯಲ್ಲೂ ಟಿಕೆಟ್ ಕೊಟ್ಟಿದೆ. ಸ್ವತಃ ಸಿಎಂಗೆ ತಮ್ಮ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿಲ್ಲ. ಅದಕ್ಕಾಗಿಯೇ ಇನ್ನೊಂದು ಕ್ಷೇತ್ರ ಆರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಐದು ವರ್ಷ ಆಡಳಿತ ನಡೆಸಿದ ಮುಖ್ಯಮಂತ್ರಿಗೆ ಅವರ ಕ್ಷೇತ್ರದಲ್ಲೇ ನೆಲೆ ಇಲ್ಲ. ಕಾಂಗ್ರೆಸ್ ಹೈಕಮಾಂಡ್, ಹೈಕಮಾಂಡ್ ಆಗಿಯೂ ಉಳಿದಿಲ್ಲ. ಹೈಕಮಾಂಡ್ ಎಂದರೆ ಸಿದ್ದರಾಮಯ್ಯ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದವೂ ಸಿಗುವುದಿಲ್ಲ, ಇತ್ತ ಬನಶಂಕರಿ ಆಶೀರ್ವಾದವೂ ದೊರೆಯುವುದಿಲ್ಲ ಎಂದು ಭವಿಷ್ಯ ನುಡಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ. ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ನಮ್ಮ ಪಕ್ಷದ ಪರ ಪ್ರಚಾರ ಮುಂದುವರೆದಿದೆ. ಎಲ್ಲೆಲ್ಲೂ ಪಕ್ಷದ ಪರ ಅಲೆ ಕಾಣಿಸುತ್ತಿದೆ ಎಂದರು.
ಟಿಕೆಟ್ ಹಂಚಿಕೆ ಬಗ್ಗೆ ಕೇಂದ್ರ ವರಿಷ್ಠರು ನಿರ್ಧಾರ ಮಾಡಿದ್ದರು. ಕೆಲವೆಡೆ ಸಣ್ಣಪುಟ್ಟ ಅಸಮಾಧಾನ ಇರುವುದು ನಿಜ. ಅದನ್ನು ಬಗೆಹರಿಸಲಾಗುತ್ತಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳು ಟಿಕೆಟ್ ಹಿಂಪಡೆಯಲಿದ್ದಾರೆ ಎಂದು ಜಗದೀಶ್‍ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ