ಬೆಳಗಾವಿ- ರಾಜ್ಯದ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಪತಿ ಪತ್ನಿ ಇಬ್ಬರೂ ಏಕಕಾಲಕ್ಕೆ ಅಖಾಡಕ್ಕಿಳಿಯುತ್ತಿರುವ ಸನ್ನಿವೇಶ ಈ ಬಾರಿಯ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಿದೆ.
ಜಿಲ್ಲೆಯ ನಿಪ್ಪಾಣಿ ಕ್ಷೇತ್ರದಿಂದ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಮೊದಲ ಪಟ್ಟಿಯಲ್ಲೇ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಇದರ ಜೊತೆಗೆ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಶಶಿಕಲಾ ಪತಿ ಅಣ್ಣಾಸಾಹೇಬ್ ಜೊಲ್ಲೆಯವರಿಗೂ ಎರಡನೇ ಪಟ್ಟಿಯಲ್ಲಿ ಪಕ್ಷ ಟಿಕೆಟ್ ಘೋಷಣೆ ಮಾಡಿದೆ.
ಅಣ್ಣಾಸಾಹೇಬ್ ಜೊಲ್ಲೆ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿಯ ಹಾಲಿ ಶಾಸಕಿಯಾಗಿದ್ದು, ಮೂರನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಬಿಜೆಪಿಯಿಂದ ಅವರನ್ನೇ ಮೂರನೇ ಬಾರಿ ಕಣಕ್ಕಿಳಿಸಲಾಗುತ್ತಿದೆ. ಸಾಮಾನ್ಯವಾಗಿ ತಂದೆ ಮಕ್ಕಳು ಚುನಾವಣಾ ಅಖಾಡಕ್ಕೆಇಳಿದಿರುವ ನಿದರ್ಶನಗಳು ಸಾಕಷ್ಟಿವೆ. ಹಾಗೇಯೇ ಪತಿಯ ನಂತರ ಪತ್ನಿಗೆ ಟಿಕೆಟ್ ಕೊಟ್ಟಿರುವ ಉದಾಹರಣೆಗಳೂ ಇವೆ.
ಆದರೇ ಪತಿ ಮತ್ತು ಪತ್ನಿ ಇಬ್ಬರೂ ಏಕಕಾಲಕ್ಕೆ ಕಣಕ್ಕಿಳಿಯುತ್ತಿರುವುದು ಬಿಜೆಪಿ ಇತಿಹಾಸದಲ್ಲೇ ಇದೇ ಮೊದಲು. ವಿಶೇಷ ಅಂದರೆ ಈ ದಂಪತಿ ಪೈಕಿ ವಿಧಾನಸಭೆಗೆ ಮೊದಲು ಪ್ರವೇಶಿಸಿದ್ದು ಪತ್ನಿ ಶಶಿಕಲಾ ಜೊಲ್ಲೆ.
2008ರಲ್ಲಿ ಮೊದಲ ಬಾರಿ ಬಿಜೆಪಿಯಿಂದಲೇ ಸ್ಪಧಿರ್Éಸಿ ಸೋಲು ಅನುಭವಿಸಿದ ಶಶಿಕಲಾ ಸತತ ಕ್ಷೇತ್ರದಲ್ಲಿ ಓಡಾಟ ನಡೆಸುವ ಮೂಲಕ 2013ರಲ್ಲಿ ಮತ್ತೆ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಈಗ ಮತ್ತೆ 2018 ವಿಧಾನಸಭೆ ಚುನಾವಣೆಗೆ ಮತ್ತೊಮ್ಮೆ ನಿಪ್ಪಾಣಿ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇನ್ನು ಪತಿ ಅಣ್ಣಾಸಾಬ ಜೊಲ್ಲೆ ಕೂಡ ತಮ್ಮದೆ ಆದ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಸಂಘ ಸಂಸ್ಥೆಗಳ ಮೂಲಕ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಸದ್ಯ ಚಿಕ್ಕೋಡಿ ಮತಕ್ಷೇತ್ರದಲ್ಲಿ ಗಣೇಶ್ ಹುಕ್ಕೇರಿ ಶಾಸಕರಿದ್ದು ಕಳೆದ 30 ವರ್ಷಗಳಿಂದ ಈ ಕ್ಷೇತ್ರ ಕಾಂಗ್ರೆಸ್ನ ಭದ್ರ ಕೋಟೆಯಾಗಿದೆ.
ಹೇಗಾದರೂ ಮಾಡಿ ಕಾಂಗ್ರೆಸ್ ಭದ್ರ ಕೋಟೆಯನ್ನ ಭೇದಿಸಲು ರಣತಂತ್ರ ಹೂಡಿರುವ ಬಿಜೆಪಿ ಈ ಬಾರಿ ಶಶಿಕಲಾ ಜೊಲ್ಲೆ ಪತಿ ಅಣ್ಣಾಸಾಬ ಜೊಲ್ಲೆ ಅವರನ್ನ ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ಸದ್ಯ ಚಿಕ್ಕೋಡಿ-ಸದಲಗಾ ಕ್ಷೇತ್ರ ಮತ್ತು ನಿಪ್ಪಾಣಿ ಕ್ಷೇತ್ರ ಅಕ್ಕಪಕ್ಕದ ಕ್ಷೇತ್ರಗಳಾಗಿದ್ದು ಜಿಲ್ಲೆಯಲ್ಲೆ ಕುತೂಹಲ ಮೂಡಿಸಿದರೂ.
ಒಟ್ಟಿನಲ್ಲಿ ಪತಿಪತ್ನಿ ಇಬ್ಬರು ಸಹ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುತ್ತಿದ್ದು ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಅಥವಾ ದಂಪತಿ ಗೆದ್ದು ವಿಧಾನಸಭೆ ಪ್ರವೇಶಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.