ಬೆಂಗಳೂರು, ಏ.25- ಮುಂಬರುವ ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಮದ್ಯಪ್ರಿಯರಿಗೂ ಇದರ ಬಿಸಿ ತಟ್ಟಿದೆ.
ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 752 ಬಾರ್, ಪಬ್ಗಳಲ್ಲಿ ಚಟುವಟಿಕೆಗಳು ಮಂಕಾಗಿವೆ. ನಿಗದಿತ ವೇಳೆಗಿಂತ ಹೆಚ್ಚಿನ ಸಮಯ ಬಾರ್, ಪಬ್ ಗಳು ಕಾರ್ಯನಿರ್ವಹಣೆ ಮಾಡಿದ ಅಥವಾ ಸಂಹಿತೆ ಉಲ್ಲಂಘಿಸಿದ ಒಟ್ಟು 752 ಬಾರ್, ಪಬ್ಗಳನ್ನು ಅಬಕಾರಿ ಇಲಾಖೆ, ಪೆÇಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.
ಬೆಂಗಳೂರು ನಗರವೊಂದರಲ್ಲೇ ಮದ್ಯವನ್ನು ಪೂರೈಕೆ ಮಾಡುವ ಸುಮಾರು 200 ಸ್ಥಳಗಳಿಗೆ ಪರವಾನಗಿ ರದ್ದುಗೊಳಿಸುವ ನೋಟಿಸ್ ಜಾರಿಗೊಳಿಸಲಾಗಿದೆ. ನಗರದಾದ್ಯಂತ ಸುಮಾರು 2,200 ಮದ್ಯ ಪೂರೈಕೆ ಮಾಡುವ ಸ್ಥಳಗಳಿವೆ. 2014ರ ಲೋಕಸಭಾ ಚುನಾವಣೆ ವೇಳೆ ರಾಜ್ಯಾದ್ಯಂತ ಕೇವಲ 14 ಮದ್ಯ ಪೂರೈಕೆ ಮಾಡುವ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲು ನೋಟಿಸ್ ಜಾರಿಗೊಳಿಸಲಾಗಿತ್ತು. ಇದರ ಹೊರತಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ 15,000 ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಚುನಾವಣಾ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಬಾರ್, ಚಿಲ್ಲರೆ ಅಂಗಡಿಗಳು, ಪಬ್ಗಳು ಮತ್ತು ರೆಸ್ಟೋರೆಂಟ್ಗಳ ಮೇಲೆ ಕಣ್ಣಿಟ್ಟಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಹೆಚ್ಚು ಪ್ರಮಾಣದಲ್ಲಿ ಮದ್ಯವನ್ನು ಖರೀದಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಮದ್ಯ ಹಂಚುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.