ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಾಗೂ ನಾಮಪತ್ರಗಳ ಪರಿಶೀಲನೆ ಮುಕ್ತಾಯ

ಬೆಂಗಳೂರು, ಏ.25-ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಾಗೂ ನಾಮಪತ್ರಗಳ ಪರಿಶೀಲನೆ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ವೇಳೆಗೆ ಕ್ರಮಬದ್ಧವಾದ ನಾಮಪತ್ರ ಹಾಗೂ ತಿರಸ್ಕøತವಾದ ನಾಮಪತ್ರಗಳ ಪ್ರಕಟಣೆಯನ್ನು ಆಯಾ ಚುನಾವಣಾಧಿಕಾರಿಗಳು ಮಾಡಲಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಕೆ ಮಾಡಲಾಗಿದ್ದ ಉಮೇದುದಾರರ ನಾಮಪತ್ರಗಳ ಪರಿಶೀಲನೆಯನ್ನು ಮಾಡಲಾಗಿದೆ.

ನಾಮಪತ್ರಗಳನ್ನು ವಾಪಸ್ ಪಡೆಯಲು ಏ.27ರವರೆಗೂ ಭಾರತದ ಚುನಾವಣಾ ಆಯೋಗ ಅವಕಾಶ ನೀಡಿದೆ. ಏ.17 ರಿಂದ ನಿನ್ನೆಯವರೆಗೂ ವಿವಿಧ ರಾಜಕೀಯ ಪಕ್ಷಗಳೂ ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಪಕ್ಷೇತರರ ಸಂಖ್ಯೆಯೇ ಹೆಚ್ಚಾಗಿದೆ. ಆಡಳಿತಾರೂಢ ಕಾಂಗ್ರೆಸ್ 223, ಬಿಜೆಪಿ 224, ಜೆಡಿಎಸ್ 205, ಬಿಎಸ್‍ಪಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.

ಬಿಜೆಪಿ, ಕಾಂಗ್ರೆಸ್, ಹಾಗೂ ಜೆಡಿಎಸ್ ಪಕ್ಷಗಳಲ್ಲೂ ಭಿನ್ನಮತೀಯರಿದ್ದು, ಅವರ ಮನವೊಲಿಸುವ ಪ್ರಯತ್ನ ಇನ್ನೆರಡು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ. ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗುವ ಭಿನ್ನಮತೀಯರನ್ನು ಮನವೊಲಿಸುವ ಪ್ರಯತ್ನವನ್ನು ಆಯಾ ಪಕ್ಷಗಳ ವರಿಷ್ಠರು ಮಾಡಲಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಭಿನ್ನಮತೀಯರು ತಮ್ಮ ತಮ್ಮ ಪಕ್ಷಗಳಲ್ಲಿ ಟಿಕೆಟ್ ಸಿಗದಿರುವುದರಿಂದ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದು ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಲಿದೆ.

ಬಹಳಷ್ಟು ಮಂದಿ ಕೊನೆ ಘಳಿಗೆಯಲ್ಲಿ ತಮ್ಮ ತಮ್ಮ ಪಕ್ಷ ಬಿಟ್ಟು ಬೇರೊಂದು ಪಕ್ಷದಲ್ಲಿ ಟಿಕೆಟ್ ಪಡೆದು ಸ್ಪರ್ಧೆಗೆ ಇಳಿದಿದ್ದಾರೆ. ಹೀಗಾಗಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಪ್ರಚಾರದ ಕಾವು ಕೂಡ ಬೇಸಿಗೆ ಬಿಸಿಲಿನಷ್ಟೇ ಜೋರಾಗಿದೆ.

ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡು ಮತಯಾಚನೆ ಮಾಡತೊಡಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ