ಬೆಂಗಳೂರು ಸೇರಿದಂತೆ ಕೆಲವೆಡೆ ಪೂರ್ವ ಮುಂಗಾರು ಮಳೆ

ಬೆಂಗಳೂರು, ಏ.25-ರಾಜಧಾನಿ ಬೆಂಗಳೂರು ಸೇರಿದಂತೆ ಕೆಲವೆಡೆ ಪೂರ್ವ ಮುಂಗಾರು ಮಳೆಯಾಗಿದೆ.

ಬೆಂಗಳೂರಿನ ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಕೆಲವು ಬಡಾವಣೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ನಿನ್ನೆ ಮಧ್ಯಾಹ್ನ ರಾಜಾಜಿನಗರ, ಕೊಟ್ಟಿಗೆಪಾಳ್ಯದಲ್ಲಿ ತಲಾ 34 ಮಿಲಿಮೀಟರ್ ಮಳೆಯಾಗಿದ್ದು, ವಿದ್ಯಾರಣ್ಯಪುರ, ತಾವರೆಕೆರೆ, ವಿದ್ಯಾಪೀಠ, ಹಂಪಿನಗರ, ಚಿಕ್ಕನಹಳ್ಳಿಯಲ್ಲಿ ತಲಾ 12.5 ಮಿ.ಮೀ, ಬಸವನಗುಡಿ, ಮಾರಪ್ಪನಪಾಳ್ಯ, ಹರಳೇಪೇಟೆಯಲ್ಲಿ ತಲಾ 10.5 ಮಿ.ಮೀ, ರಾಧಾಕೃಷ್ಣದೇವಾಲಯ ವಾರ್ಡ್, ಅಗ್ರಹಾರ ದಾಸರಹಳ್ಳಿ, ವರ್ತೂರು ತಲಾ 16 ಮಿ.ಮೀಟರ್‍ನಷ್ಟು ಮಳೆಯಾಗಿದ್ದು, ಉಳಿದ ಕೆಲವು ಬಡಾವಣೆಗಳಲ್ಲಿ ಹಗುರ ಹಾಗೂ ಸಾಧಾರಣ ಮಳೆಯಾದ ವರದಿಯಾಗಿದೆ.

ಮರಗಳು ರಸ್ತೆ, ಮನೆಗಳ ಮೇಲೂ ಮುರಿದುಬಿದ್ದಿವೆ. ಹೀಗಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದಲ್ಲದೆ, ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.
ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್‍ನಲ್ಲಿ ರಸ್ತೆಗಳಲ್ಲಿ ಮುರಿದುಬಿದ್ದ ಮರಗಳು ಹಾಗೂ ವಿದ್ಯುತ್ ಕಂಬಗಳ ರಾಶಿಯೇ ಕಂಡುಬಂದಿತ್ತು.ಬಿಬಿಎಂಪಿ ಹಾಗೂ ಬೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸುವುದು, ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿನ್ನೆಯಿಂದಲೂ ನಿರತರಾಗಿದ್ದಾರೆ. ಬಿರುಗಾಳಿ ಮಳೆಗೆ ಮರ ಹಾಗೂ ಕಂಬಗಳು ಹಲವು ವಾಹನಗಳ ಮೇಲೆ ಬಿದ್ದಿದ್ದವು. ಇದರಿಂದ ದ್ವಿಚಕ್ರ ಹಾಗೂ ಕಾರುಗಳು ಕೂಡ ಜಖಂಗೊಂಡಿವೆ.

ಹವಾ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇಂದು ಸಂಜೆ ಹಾಗೂ ರಾತ್ರಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ