ಸಿನಿಮಾ ರಂಗದ ನಂಟಿನೊಂದಿಗೆ ರಾಜಕೀಯಕ್ಕೆ ಧುಮುಕಿ ಈ ಬಾರಿ ಚುನಾವಣಾ ಕಣಕ್ಕಿಳಿದ ನಾಯಕರು.

ಬೆಂಗಳೂರು, ಏ.25-ರಾಜಕೀಯ ಕ್ಷೇತ್ರಕ್ಕೂ, ಸಿನಿಮಾ ರಂಗಕ್ಕೂ ಅವಿನಾಭಾವ ಸಂಬಂಧ. ರಾಜಕಾರಣಿಗಳು ಚುನಾವಣೆ ಸಂದರ್ಭ ಬಂದಾಗ ನಟ-ನಟಿಯರ ಮೊರೆ ಹೋಗುವುದು ಸಾಮಾನ್ಯ. ರಾಜಕೀಯವಾಗಿ ಇದರ ಲಾಭ ಪಡೆದು ಮೇಲೆ ಬರಲು ಹಲವು ನಟ-ನಟಿಯರು ಪ್ರಯತ್ನಿಸುತ್ತಾರೆ. ಅಂಥವರಲ್ಲಿ ಕೆಲವರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡು ನಾಯಕರಾಗುತ್ತಾರೆ. ಮತ್ತೆ ಹಲವರು ಶಾಸಕರು, ಸಚಿವರಾಗಿದ್ದಾರೆ.

ಮತ್ತಷ್ಟು ನಟ-ನಟಿಯರು ಪ್ರಸ್ತುತ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಟಿಕೆಟ್ ಪಡೆದು ಚುನಾವಣಾ ಕಣಕ್ಕಿಳಿದಿದ್ದಾರೆ. ಅಂಥವರಲ್ಲಿ ಸಚಿವೆ ಉಮಾಶ್ರೀ, ಜಗ್ಗೇಶ್, ಸಾಯಿಕುಮಾರ್, ಶಶಿಕುಮಾರ್, ಬಿ.ಸಿ.ಪಾಟೀಲ್, ಸಿ.ಪಿ.ಯೋಗೇಶ್ವರ್, ಮಧು ಬಂಗಾರಪ್ಪ, ಕುಮಾರಬಂಗಾರಪ್ಪ, ನಿರ್ಮಾಪಕರಾದ ಎಚ್.ಡಿ.ಕುಮಾರಸ್ವಾಮಿ, ಸಿ.ಆರ್.ಮನೋಹರ್, ಮುನಿರತ್ನ ನಾಯ್ಡು ಮುಂತಾದವರು ಅಖಾಡದಲ್ಲಿದ್ದಾರೆ.

ಸಚಿವೆ ಉಮಾಶ್ರೀ ಅವರು ತೆರದಾಳ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದ ಅವರು ಈ ಕ್ಷೇತ್ರದಲ್ಲಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.

ಬಾಗೇಪಲ್ಲಿ ಕ್ಷೇತ್ರದಿಂದ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಭಾಗದಲ್ಲಿ ತೆಲುಗು ಪ್ರಭಾವ ಹೆಚ್ಚಾಗಿರುವುದರಿಂದ ಕನ್ನಡ ಮತ್ತು ತೆಲುಗು ಜನಪ್ರಿಯ ನಟ ಆಗಿರುವುದರಿಂದ ಸಾಯಿಕುಮಾರ್ ಅವರನ್ನು ಬಿಜೆಪಿ ಈ ಭಾಗದಲ್ಲಿ ಕಣಕ್ಕಿಳಿಸಿದೆ.

ಇನ್ನು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಪುತ್ರರಾದ ಕುಮಾರಬಂಗಾರಪ್ಪ,ನಾಯಕನಟ ಹಾಗೂ ರಾಜಕಾರಣಿ. ಅದೇ ರೀತಿ ಮಧುಬಂಗಾರಪ್ಪ ಕೂಡ. ಈ ಇಬ್ಬರು ಕ್ರಮವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹುರಿಯಾಳುಗಳಾಗಿ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದಾರೆ. ಸೊರಬ ಕ್ಷೇತ್ರದಲ್ಲಿ ಇಬ್ಬರೂ ಎದುರಾಳಿಗಳು.
ಸಂಸದರಾಗಿದ್ದ ಶಶಿಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಮೊಳಕಾಲ್ಮೂರು ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷ ಇವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಈಗ ಹೊಸದುರ್ಗ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ತುರುವೇಕೆರೆ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಗೆಲುವು ಸಾಧಿಸಿ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದ ನಟ ಜಗ್ಗೇಶ್ ಅವರು ವಿಧಾನಪರಿಷತ್ ಸದಸ್ಯರಾಗಿದ್ದರು. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ. ಚಲನಚಿತ್ರ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿರುವ ಒಕ್ಕಲಿಗರ ಪ್ರಭಾವಿ ನಾಯಕರೂ ಆಗಿರುವ ಜಗ್ಗೇಶ್ ಅವರನ್ನು ಅಳೆದು-ತೂಗಿ ರಾಜಕೀಯ ಲೆಕ್ಕಾಚಾರ ಹಾಕಿ ಬಿಜೆಪಿ, ಯಶವಂತಪುರದಲ್ಲಿ ಕಣಕ್ಕಿಳಿಸಿದೆ.

ಮತ್ತೊಬ್ಬ ನಾಯಕ ನಟ ಕಾಂಗ್ರೆಸ್‍ನ ಬಿ.ಸಿ.ಪಾಟೀಲ್ ಹಿರೇಕೆರೂರು ಕ್ಷೇತ್ರದ ಹುರಿಯಾಳು. ಕಳೆದ ಬಾರಿ ಸೋಲು ಅನುಭವಿಸಿದ್ದ ಬಿ.ಸಿ.ಪಾಟೀಲ್ ಸಕ್ರಿಯವಾಗಿ ಗುರುತಿಸಿಕೊಂಡು ಈಗ ಟಿಕೆಟ್ ಪಡೆದು ಹಿರೇಕೆರೂರಿನಲ್ಲಿ ಸ್ಪರ್ಧೆಗಿಳಿದಿದ್ದಾರೆ.

ಇನ್ನು ರಂಗುರಂಗಿನ ರಾಜಕಾರಣಿ ಕಾಂಗ್ರೆಸ್, ಎಸ್‍ಪಿ, ಬಿಜೆಪಿ, ಪಕ್ಷೇತರ ಎಲ್ಲಾ ಪಕ್ಷಗಳಲ್ಲಿದ್ದು, ಈಗ ಮತ್ತೆ ಬಿಜೆಪಿ ಸೇರಿರುವ ಮತ್ತೊಬ್ಬ ನಾಯಕನಟ ಹಾಗೂ ರಾಜಕಾರಣಿ ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿದ್ದಾರೆ.

ಚಿತ್ರರಂಗದ ನಿರ್ಮಾಪಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಮತ್ತು ಚನ್ನಪಟ್ಟಣದ ಎರಡೂ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರೆ, ಮುನಿರತ್ನ ನಾಯ್ಡು ರಾಜರಾಜೇಶ್ವರಿ ನಗರದ ಕಾಂಗ್ರೆಸ್‍ನ ಹುರಿಯಾಳುವಾಗಿದ್ದರೆ, ನಿರ್ಮಾಪಕ ಸಿ.ಆರ್.ಮನೋಹರ್ ಜೆಡಿಎಸ್‍ನಿಂದ ಬಾಗೇಪಲ್ಲಿ ಕ್ಷೇತ್ರದ ಚುನಾವಣಾ ಕಣದಲ್ಲಿದ್ದಾರೆ.

ಅಂಬರೀಶ್ ಅವರು ಕೊನೆ ಕ್ಷಣದಲ್ಲಿ ಚುನಾವಣೆಯಿಂದ ನಿವೃತ್ತಿ ಘೋಷಿಸಿದರು. ಇನ್ನು ಭಾವನಾ, ಜಯಮಾಲಾ ಮುಂತಾದವರು ಪ್ರಯತ್ನಿಸಿದರೂ ಅವಕಾಶ ದೊರೆಯಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ