ಬೆಂಗಳೂರು, ಏ.24-ವರನಟ ಡಾ.ರಾಜ್ಕುಮಾರ್ ಅವರ 90ನೆ ಹುಟ್ಟುಹಬ್ಬದ ಅಂಗವಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಇಂದು ರಾಜ್ಕುಮಾರ್ ಅವರ ಸ್ಮಾರಕಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಕುಮಾರ್ ಅವರ ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಬೆಳಿಗ್ಗೆಯೇ ಕಂಠೀರವ ಸ್ಟುಡಿಯೋಗೆ ತೆರಳಿ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿ ಸಾಗರವೇ ಹರಿದು ಬಂದಿತ್ತು. ಇದೇ ವೇಳೆ ಶಿವರಾಜ್ಕುಮಾರ್ ಅಭಿನಯದ ರುಸ್ತುಂ ಸಿನಿಮಾ ಫಸ್ಟ್ ಲುಕ್ ರಿಲೀಸ್ ಮಾಡಲಾಯಿತು.
ರಾಜ್ ಪುತ್ಥಳಿ ಮುಂದೆ ವಿವಾಹ:
ಡಾ.ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಏನೇನೆಲ್ಲ ಮಾಡಿ ಅಭಿಮಾನ ತೋರುತ್ತಾರೆ. ಇಲ್ಲೊಬ್ಬರು ಅಭಿಮಾನಿ ರಾಜ್ ಜನ್ಮದಿನದಂದೇ ಅವರ ಪುತ್ಥಳಿ ಬಳಿ ವಿವಾಹ ಮಾಡಿಕೊಂಡು ಎಲ್ಲರ ಗಮನಸೆಳೆದಿದ್ದಾರೆ.
ವರನಟನ ಕಟ್ಟಾ ಅಭಿಮಾನಿ ಕುರುಬರಹಳ್ಳಿ ನಿವಾಸಿ ರುದ್ರ ಎಂಬುವರು ಕುರುಬರಹಳ್ಳಿ ಬಳಿ ಇರುವ ರಾಜ್ ಪುತ್ಥಳಿ ಬಳಿ ಶಿಲ್ಪ ಅವರ ಕೈ ಹಿಡಿದು ಇಂದೇ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ನವದಂಪತಿ ರಾಜ್ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಿರ್ದೇಶಕ ವಿನಾಯಕ್ರಾಮ್ ಕಲಗಾರು ಅವರು ಡಾ.ರಾಜ್ಕುಮಾರ್ ರಸ್ತೆ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೇ ವೇಳೆ ಚಿತ್ರತಂಡ ನೇತ್ರದಾನ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ.
ಪ್ರತಿವರ್ಷವೂ ಅಣ್ಣಾವ್ರ ಹುಟ್ಟುಹಬ್ಬದ ಅಂಗವಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಅಭಿಮಾನ ಬಳಗದವರು ಹಮ್ಮಿಕೊಳ್ಳುತ್ತಿದ್ದರು. ಈ ವರ್ಷ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿಲ್ಲವಾದರೂ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಂಠೀರವ ಸ್ಟುಡಿಯೋದಲ್ಲಿ ಪೂಜೆ ನೆರವೇರಿಸಿದ ನಂತರ ನಟ ಶಿವರಾಜ್ಕುಮಾರ್, ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿರುವ ರಾಜ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಅಣ್ಣಾವ್ರ ಜನ್ಮದಿನದ ಅಂಗವಾಗಿ ವಾಣಿಜ್ಯ ಮಂಡಳಿ ಮುಂಭಾಗ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿ ನಟ ಶಿವರಾಜ್ಕುಮಾರ್, ಅಪ್ಪಾಜಿ ಮೇಲೆ ಇಷ್ಟೊಂದು ಪ್ರೀತಿ ತೋರುತ್ತಿರುವ ಅಭಿಮಾನಿಗಳಿಗೆ ನಮ್ಮ ಕುಟುಂಬ ಎಂದೆಂದೂ ಚಿರಋಣಿಯಾಗಿರುತ್ತದೆ. ಇದೇ ರೀತಿ ಅಭಿಮಾನಿಗಳ ಪ್ರೀತಿ ನಿರಂತರವಾಗಿ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಉಪಾಧ್ಯಕ್ಷರಾದ ಎಂ.ಜಿ.ರಾಮಮೂರ್ತಿ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಹಾಗೂ ರಾಜ್ಕುಟುಂಬದವರು, ಹಲವಾರು ಅಭಿಮಾನಿಗಳು ಉಪಸ್ಥಿತರಿದ್ದರು.
ವಿವಿಧೆಡೆ ರಾಜ್ ಜನ್ಮದಿನಾಚರಣೆ:
ನಗರದ ವಿವಿಧೆಡೆ ರಾಜ್ ಅಭಿಮಾನಿಗಳು ವರನಟನ ಜನ್ಮದಿನ ಆಚರಿಸಿದರು.
ರಸ್ತೆಗಳಲ್ಲಿ ಡಾ.ರಾಜ್ ಭಾವಚಿತ್ರವಿಟ್ಟು ಪೂಜೆಮಾಡಿ ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದರು.
ಕೆಲವೆಡೆ ಅಭಿಮಾನಿಗಳು ರಾಜ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಾಜ್ ಅಭಿನಯದ ಚಿತ್ರಗೀತೆಗಳನ್ನು ಹಾಕಿ ಖುಷಿಪಟ್ಟರು.
ಇನ್ನೂ ಕೆಲವೆಡೆ ರಾಜ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿ ಅಭಿಮಾನಿಗಳು ಸಾರ್ವಜನಿಕರ ದಾಹ ತಣಿಸುವ ಮೂಲಕ ತಮ್ಮ ಅಭಿಮಾನ ಮೆರೆದರು.
ಸಂಜೆ ಕಾರ್ಯಕ್ರಮ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಇಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ.ರಾಜ್ಕುಮಾರ್ 90ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ರಾಜ್ ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರರಾಜ್ಕುಮಾರ್, ಪುನೀತ್ರಾಜ್ಕುಮಾರ್ ಪಾಲ್ಗೊಳ್ಳಲಿದ್ದು, ಚಿತ್ರೋದ್ಯಮದ ಗಣ್ಯರು ಹಾಗೂ ರಾಜ್ಕುಟುಂಬದವರು ಭಾಗವಹಿಸಲಿದ್ದು, ಖ್ಯಾತ ಚಲನಚಿತ್ರ ಗಾಯಕರಾದ ಮಂಜುಳಾ ಗುರುರಾಜ್, ಸುನೀತಾ ಮೋಹನ್ ಅವರು ಡಾ.ರಾಜ್ ಕುಮಾರ್ ಚಿತ್ರಗಳ ಗೀತಗಾಯನ ನಡೆಸಿಕೊಡಲಿದ್ದಾರೆ.