ಬೆಂಗಳೂರು, ಏ.24- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಂರಕ್ಷಿತ ವಲಯ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಲು ಸರ್ಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರ ಪ್ರೇಮಿ ಹಾಗೂ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಸಲ್ಡನಾ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಂರಕ್ಷಿತ ವಲಯ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯಿಂದಾಗಿ ಪರಿಸರ ನಾಶಗೊಳ್ಳುತ್ತಿದೆ. ಈ ಕಲ್ಲು ಗಣಿಗಾರಿಕೆಗೆ ಸೇರಿದ 200ಕ್ಕೂ ಹೆಚ್ಚು ವಾಹನಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮೂಲಕ ಮುಖ್ಯರಸ್ತೆ ಸೇರಲು 10ಕಿಮೀ ಸಂಚರಿಸಬೇಕಾಗುತ್ತದೆ. ಇದರಿಂದ ಅರಣ್ಯ ಸಂಪತ್ತು ನಾಶವಾಗುತ್ತದೆ ಎಂದು ಆರೋಪಿಸಿದರು.
ಸರ್ವೋಚ್ಛ ಆದೇಶದ ಅನುಸಾರ ಸ್ಥಾಪನೆಯಾಗಿರುವ ಸಿಇಸಿ ಸಮಿತಿ ನಿಯಮದ ಅನ್ವಯ ಸಂರಕ್ಷಿತ ವಲಯ ನೂರು ಮೀಟರ್‍ನಿಂದ 2ಕಿಮೀ ವರೆಗೆ ವಿಸ್ತರಣೆ ಹೊಂದಿರಬೇಕಾಗುತ್ತದೆ. ಇದರಲ್ಲಿ ಅರಣ್ಯ ಪ್ರದೇಶಗಳನ್ನು ವಿವಿಧ ಕ್ಯಾಟಗರಿಗಳನ್ನಾಗಿ ವಿಭಜನೆ ಮಾಡಿ ಆ ಕ್ಯಾಟಗರಿಗಳ ನ್ಯಾಯ ಸಂರಕ್ಷಿತ ವಲಯ ಪ್ರದೇಶ ವಿಸ್ತಾರವನ್ನು ನಿಗದಿಪಡಿಸಬೇಕು ಎಂದರು.
ಸರ್ಕಾರ ಈ ಕ್ರಮವನ್ನು ಅನುಸರಿಸದಿದ್ದರೆ ನ್ಯಾಯಾಲಯ ಆದೇಶದ ಉಲ್ಲಂಘನೆಗೆ ಗುರಿಯಾಗಬೇಕಾಗುತ್ತದೆ ಎಂದ ಅವರು, ಅರಣ್ಯ ಪ್ರದೇಶದಲ್ಲಿ ಮರ ಕಡಿಯುವುದು, ಪ್ರಾಣಿಗಳನ್ನು ಕೊಲ್ಲುವುದು, ಬೆಂಕಿ ಹಚ್ಚುವುದು ಇಂತಹ ಅತಿಕ್ರಮಣ ನಡೆಯುತ್ತಿದೆ. ಇಷ್ಟೆಲ್ಲ ಅರಣ್ಯ ಸಂಪತ್ತು ನಾಶ ಮತ್ತು ಲೂಟಿಯಾಗುತ್ತಿದ್ದರೂ ಅರಣ್ಯ ಇಲಾಖೆ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರಾಷ್ಟ್ರೀಯ ಉದ್ಯಾನವನವನ್ನು ಸಂರಕ್ಷಣೆ ಮಾಡುವುದಾಗಿ ಮನವಿ ಮಾಡಿದರು.