ಚಿಕ್ಕಮಗಳೂರು, ಏ.24-ಕೇಂದ್ರದ ಬಿಜೆಪಿ ಸರ್ಕಾರ ಅತ್ಯಾಚಾರಿಗಳಿಗೆ ಬೆಂಬಲಿಸುತ್ತಿದೆ ಎಂದು ನಟಿ ಜಯಮಾಲಾ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಳೆ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸರ್ಕಾರ ಈಗ ಬೂಟಾಟಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಪುನರ್‍ಜನ್ಮ ನೀಡಿದ ಚಿಕ್ಕಮಗಳೂರು ಪುಣ್ಯ ಭೂಮಿ. ಈ ಜಿಲ್ಲೆಯವರೇ ಆದ ಬಿ.ಎಲ್.ಶಂಕರ್ ಸರಳ ಸಜ್ಜನಿಕೆಯ ವ್ಯಕ್ತಿ ಇವರನ್ನು ಗೆಲ್ಲಿಸಿದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣುತ್ತದೆ ಎಂದರು.
ನಾನು ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದವಳು. ಮತದಾರರು ಈ ಬಾರಿ ಕಾಂಗ್ರೆಸ್‍ನ ಕೈ ಹಿಡಿಯಬೇಕೆಂದರು.
ಇದೇ ಸಂದರ್ಭದಲ್ಲಿ ಅಭ್ಯರ್ಥಿ ಶಂಕರ್ ಮಾತನಾಡಿ, ನಾನು ಜನರ ಸೇವಕನಾಗಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ವಿನಃ ಗುತ್ತಿಗೆದಾರನಾಗುವ ಅವಶ್ಯಕತೆ ನನಗೆ ಇಲ್ಲ ಎಂದು ಶಾಸಕ ಸಿ.ಟಿ.ರವಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಗಾಯಿತ್ರಿ ಶಾಂತೇಗೌಡ ಮಾತನಾಡಿ, ನಾನೇ ಗೆಲ್ಲುತ್ತೇನೆ ಎಂದು ಸಿ.ಟಿ.ರವಿ ಹಗಲು ಕನಸು ಕಾಣುತ್ತಿದ್ದಾರೆ. 3 ಬಾರಿ ಗೆದ್ದು ಸ್ವಂತ ಅಭಿವೃದ್ಧಿ ಮಾಡಿಕೊಂಡರೆ ವಿನಃ ಕ್ಷೇತ್ರ ಅಭಿವೃದ್ಧಿಗೊಳ್ಳಲಿಲ್ಲ. ಇದಕ್ಕೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ನಾಮಪತ್ರ ಸಲ್ಲಿಸಿದ ವೇಳೆ ಬೃಹತ್ ಮೆರವಣಿಗೆ ಏರ್ಪಡಿಸಲಾಗಿತ್ತು. ಭಾವನಾ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್, ಮುಖಂಡರಾದ ಎಂ.ಎಲ್.ಮೂರ್ತಿ, ಹಿರೇಮಗಳೂರು ಪುಟ್ಟಸ್ವಾಮಿ, ಶಾಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.