ನವದೆಹಲಿ:ಏ-23: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಾಗ್ದಂಡನೆಗೆ ವಿರೋಧ ಪಕ್ಷಗಳು ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದ್ದಾರೆ.
ಹೈದರಾಬಾದ್ ಪ್ರವಾಸವನ್ನು ಮೊಟಕುಗೊಳಿಸಿದ್ದ ನಾಯ್ಡು ಅವರು, ರಾಜಧಾನಿಗೆ ಹಿಂತಿರುಗಿ ಕಾನೂನು ತಜ್ಞರು ಮತ್ತು ಸಂಸದೀಯ ವ್ಯವಹಾರಗಳಲ್ಲಿ ಅನುಭವ ಹೊಂದಿರುವವರ ಸಲಹೆ ಹಾಗೂ ಸೂಚನೆಗಳನ್ನು ಪಡೆದುಕೊಂಡಿದ್ದರು. ತೀವ್ರ ಸಮಾಲೋಚನೆಗಳ ಬಳಿಕ ನಾಯ್ಡು ಅವರು, ವಿರೋಧ ಪಕ್ಷಗಳು ಸಲ್ಲಿಸಿದ್ದ ವಾಗ್ದಂಡನೆ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ವಾಗ್ದಂಡನೆಗೆ ಅನುಮತಿ ನೀಡುವಂತೆ ಕೋರಿ ಗುಲಾಂ ನಬಿ ಆಜಾದ್ ನೇತೃತ್ವದ ವಿರೋಧ ಪಕ್ಷಗಳ ನಿಯೋಗ ಇತ್ತೀಚೆಗಷ್ಟೇ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಸೊಹ್ರಾಬುದ್ದೀನ್ ಶೇಖ್ ಅನುಮಾನಾಸ್ಪದ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶ ಬಿ.ಹೆಚ್. ಲೋಯಾ ಸಾವಿನ ತನಿಖೆಗೆ ಆದೇಶಿಸಲು ದೀಪಕ್ ಮಿಶ್ರಾ ನಿರಾಕರಿಸಿದ ಹಿನ್ನಲೆಯಲ್ಲಿ ವಾಗ್ದಂಡನೆಗೆ ಕಾಂಗ್ರೆಸ್ ಮುಂದಾಗಿತ್ತು. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ ಆದೇಶ ನೀಡಿದ ಬೆನ್ನಲ್ಲೇ 7 ಪ್ರತಿಪಕ್ಷಗಳ ರಾಜ್ಯಸಭೆಯ 71 ಸದಸ್ಯರು ಸಹಿ ಹಾಕಿ ಮಹಾಭಿಯೋಗಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ನೋಟಿಸ್ ನೀಡಿದ್ದರು.
ಆದರೆ, ಈ ಮಹಾಭಿಯೋಗ ನಿಲುವಳಿ ಸೂಚನೆಗೆ ಪಕ್ಷದ ಪ್ರಮುಖ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ರಾಜ್ಯಸಭಾ ಸದಸ್ಯರಾದ ಪಿ.ಚಿದಂಬರಂ, ಅಭಿಷೇಕ್ ಮನು ಸಿಂಗ್ವಿ, ಸಲ್ಮಾನ್ ಖುರ್ಷಿದ್ ನೋಟಿಸ್’ಗೆ ಸಹಿ ಹಾಕಿರಲಿಲ್ಲ. ಎಡಪಕ್ಷಗಳಲ್ಲಿ ಪ್ರಕಾಶ್ ಕಾರಟ್ ಸೇರಿ ಕೆಲ ಮುಖಂಡರು ಪ್ರಸ್ತಾವನೆಯೆ ವಿರೋಧ ವ್ಯಕ್ತಪಡಿಸಿದ್ದರು.
ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ 5 ಆರೋಪ ಹೊರಿಸಿದ್ದ ವಿರೋಧ ಪಕ್ಷಗಳು, ಅವರ ವಿರುದ್ಧ ದುರ್ನಡತೆ ಹಾಗೂ ಅಧಿಕಾರ ದುರ್ಬಳಕೆ ಆರೋಪ ಹೊರಿಸಿತ್ತು. ಇದರೊಂದಿಗೆ ನ್ಯಾಯಾಂಗ ಮತ್ತು ರಾಜಕೀಯ ಪಕ್ಷಗಳ ನಡುವೆ ಸಂಘರ್ಷ ತಲೆದೋರುವ ಸಾಧ್ಯತೆಗಳಿವೆ.
Venkaiah Naidu rejects, Congress’ impeachment motion, against CJI Dipak Misra