ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರನ್ನು ಟೀಕಿಸುವಾಗ ಬಿಜೆಪಿ ನಾಯಕರಿಗೆ ಎಚ್ಚರವಿರಲಿ: ಕರ್ನಾಟಕ ಕುರುಬರ ಜಾಗೃತಿ ಸಮಿತಿ

ಬೆಂಗಳೂರು,ಏ.23- ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರನ್ನು ಟೀಕಿಸುವಾಗ ಎಚ್ಚರದಿಂದ ಮಾತನಾಡಬೇಕೆಂದು ಕರ್ನಾಟಕ ಕುರುಬರ ಜಾಗೃತಿ ಸಮಿತಿಯ ಅಧ್ಯಕ್ಷ ಎಂ.ಮಹದೇವ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಅನಂತಕುಮಾರ್, ಶೋಭಾಕರಂದ್ಲಾಜೆ ಹಾಗೂ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿಯವರನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿಹೋದವರು ಎಂದು ವ್ಯಂಗ್ಯವಾಡುತ್ತಿದ್ದಾರೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯನವರ ವರ್ಚಸ್ಸು ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ ಎಂದರು.

ಕಳೆದ 40 ವರ್ಷಗಳಿಂದ ಸಕ್ರೀಯವಾಗಿ ರಾಜಕೀಯದಲ್ಲಿ ಬೆಳೆದು ಬಂದಿರುವ ಸಿದ್ದರಾಮಯ್ಯನವರ ವರ್ಚಸ್ಸೇ ಕಾಂಗ್ರೆಸ್ ಯಶಸ್ಸು. ಇದನ್ನು ಕೆಲವರು ತಿಳಿದುಕೊಂಡು ಮಾತನಾಡಬೇಕು. ಸಿದ್ದರಾಮಯ್ಯನವರು ಬಾದಾಮಿಯಲ್ಲಿಯೂ ಸ್ಫರ್ಧಿಸುತ್ತಿರುವ ಬಗ್ಗೆ ಅನಗತ್ಯವಾಗಿ ಟೀಕೆ ಮಾಡಲಾಗುತ್ತಿದೆ. ಸಂವಿಧಾನ ನಿಯಮದ ಅನ್ವಯ ಒಬ್ಬ ವ್ಯಕ್ತಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವಿದೆ. ಆದರೆ ಇದನ್ನುಬಿಜೆಪಿ ನಾಯಕರು ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರನ್ನು ಟೀಕೆ ಮಾಡುವ ಮೊದಲ ನಿಮ್ಮ ರಾಜಕೀಯ ಸ್ಥಾನಮಾನದ ಅರಿವು ಇದ್ದರೆ ಒಳ್ಳೆಯದು. ಅವರ ರಾಜಕೀಯ ವರ್ಚಸ್ಸು ತಿಳಿದ ಹೈಕಮಾಂಡ್ ಅವರೇ ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇನ್ನು ಮುಂದೆ ಸಿದ್ದರಾಮಯ್ಯನವರನ್ನು ಅನಗತ್ಯವಾಗಿ ಟೀಕೆ ಮಾಡದಿರಿ ಎಂದು ಎಚ್ಚರಿಸಿದರು.
ಸಮಿತಿಯ ಕಾರ್ಯಾಧ್ಯಕ್ಷರಾದ ಆರ್.ಜಿ.ಶಂಕರರಾಮೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಶ್ರೀನಿವಾಸ ಮೂರ್ತಿ, ಪ್ರಧಾನ ಸಂಘಟನಾ ಕಾರ್ಯದರ್ಶಿ ಪಿ.ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ