ಚುನಾವಣಾ ಆಯೋಗದ ಕೆಲ ಅಧಿಕಾರಿಗಳಿಂದ ರಾಜ್ಯ ಸರ್ಕಾರದ ಪರವಾಗಿ ಕೆಲಸ: ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಆರೋಪ

 

ಬೆಂಗಳೂರು, ಏ.23- ಚುನಾವಣಾ ಆಯೋಗದ ಕೆಲ ಅಧಿಕಾರಿಗಳು ರಾಜ್ಯ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದು ಈ ಸಂಬಂಧ ದೂರು ನೀಡಲಾಗುವುದು ಎಂದು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಆರೋಪಿಸಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯಬೇಕೆಂಬುದು ನಮ್ಮ ಅಭಿಲಾಷೆ ಆದರೆ ಆಯೋಗದಲ್ಲಿರುವ ಕೆಲ ಅಧಿಕಾರಿಗಳು ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಒಂದು ಪಕ್ಷದ ಪರವಾಗಿ ಕೆಲಸ ಮಾಡುವುದು ಸರಿಯಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ಷೇಪಿಸಿದರು.
ನಮ್ಮ ಕಾರ್ಯಕರ್ತರ ಮನೆಯ ಗೋಡೆಗಳ ಮೇಲೆ ಪಕ್ಷದ ಚಿಹ್ನೆ ಬರೆದುಕೊಂಡರೆ ಇವರಿಗೇನು ಸಮಸ್ಯೆ.ಆರು ತಿಂಗಳ ಹಿಂದೆಯೇ ಬರೆಸಿಕೊಳ್ಳಲಾಗಿದೆ. ಈಗ ಅದನ್ನು ಅಳಿಸಿಹಾಕಲಾಗುತ್ತದೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಬೆಂಗಳೂರು ಸೇರಿದಂತೆ ನಾಆ ಕಡೆ ಪಕ್ಷದ ಜಾಹಿರಾತು ಹಾಗೂ ಹೋರ್ಡಿಂಗ್ಸ್‍ಗಳನ್ನು ಹಾಕಲು ಆಯೋಗ ಅವಕಾಶ ನೀಡುತ್ತಿಲ್ಲ. ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಕ್ಕೂ ಅವಕಾಶ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಕೆಲವರು ಕೆಲಸ ಮಾಡತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.

ಇದೇ 25ರಂದು ನಮ್ಮ ಮನೆ ಬಿಜೆಪಿ ಮನೆ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಆರಂಭಿಸಲಿದ್ದೇವೆ. ಪಕ್ಷದ ಕಾರ್ಯಕರ್ತರು ಅವರವರ ಮನೆ ಮೇಲೆ ಬಿಜೆಪಿಯ ಬಾವುಟವನ್ನು ಹಾರಿಸಲಿದ್ದಾರೆ. ಸುಮಾರು 11 ಲಕ್ಷ ಜನ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ನಮಗೆ ಪ್ರಚಾರ ನೀಡಲು ಅವಕಾಶ ನೀಡುತ್ತಿಲ್ಲ. ಕಾರ್ಯಕರ್ತರು ಊಟ ಮಾಡುವುದನ್ನೇ ಸಹಿಸುವುದಿಲ್ಲ. ಅವರವರ ಮನೆ ಮೇಲೆ ಪಕ್ಷದ ಕಾರ್ಯಕರ್ತರು ಪಕ್ಷದ ಬಾವುಟ ಹಾರಿಸಿಕೊಂಡರೆ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ. ಈ ಬಗ್ಗೆ ಆಯೋಗಕ್ಕೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಹಾಗೂ ಅವರ ನಾಯಕತ್ವ ಹದಗೆಟ್ಟಿದೆ. ಪಕ್ಷ ಸೋಲುವುದರ ಜೊತೆಗೆ ಎರಡೂ ಕ್ಷೇತ್ರಗಳಲ್ಲಿ ಅವರ ಸೋಲು ಕಟ್ಟಿಟ್ಟ ಬುತ್ತಿ. ಬಾದಾಮಿಯಲ್ಲಿ ಏನೇ ತಿಪ್ಪರಲಾಗ ಹಾಕಿದರೂ ಅವರ ಗೆಲುವಿಗೆ ಬಿಜೆಪಿ ಬಿಡುವುದಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸಕ್ಕೆ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಅವರ ಜೊತೆ ಯೋಗಿ ಆದಿತ್ಯನಾಥ್, ದೇವೇಂದ್ರ ಫಡ್ನವೀಸ್, ಉಮಾಭಾರತಿ, ಸ್ಮೃತಿ ಇರಾನಿ, ರಾಜನಾಥ್ ಸಿಂಗ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮುರುಳೀಧರ್ ರಾವ್ ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ