ಎಂಇಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬಿ.ಫಾರಂ ಹಂಚಿಕೆ, ಕೆಲವು ಕ್ಷೇತ್ರಗಳಲ್ಲಿ ಬದಲು

ಬೆಂಗಳೂರು, ಏ.23 : ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಎಂಇಪಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬಿ.ಫಾರಂ ಹಂಚಿಕೆ ಕಾರ್ಯ ಮುಗಿದಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿದೆ.

ಬಿ ಫಾರಂ ಪಡೆದ ಎಲ್ಲ ಅಭ್ಯರ್ಥಿಗಳು ನಾಳೆ ಮಧ್ಯಾಹ್ನ 3 ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಸ್ಪಷ್ಟ ಸೂಚನೆ ನೀಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ತಾಂತ್ರಿಕ ಕಾರಣಗಳ ಮೇರೆಗೆ ಸಂಬಂಧಿಸಿದ ಅಭ್ಯರ್ಥಿಗಳಿಗೆ ಬಿ.ಫಾರಂ ನೀಡಲಾಗಿಲ್ಲ. ಬದಲಿಯಾಗಿ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ, ಬಿ.ಫಾರಂ ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಪಕ್ಷದಲ್ಲಿ 5800ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್ ಬಯಸಿದ್ದರು. ಆದರೆ, ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂಬುದು ಬಹಿರಂಗ ಸತ್ಯ. ಹೀಗಾಗಿ, ಕೆಲವರನ್ನು ಆಯ್ಕೆ ಮಾಡಿ ಪಟ್ಟಿ ಆಖೈರುಗೊಳಿಸಲಾಗಿದೆ. ಪಕ್ಷದ ಅಭ್ಯರ್ಥಿಗಳಿಗೆ ಬಿ.ಫಾರಂ ನೀಡುವಾಗ ಹಲವರ ಕಣ್ಣಲ್ಲಿ ಆಶ್ರುತರ್ಪಣ ಕಂಡುಬಂತು. ತಮ್ಮಂತಹವರಿಗೂ ಕೂಡ ಜೀವನದಲ್ಲಿ ರಾಜಕೀಯ ರಂಗದಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿತಲ್ಲ ಎಂಬುದು ಇದಕ್ಕೆ ಕಾರಣವಾಗಿತ್ತು. ಇದರ ಅರ್ಥ ಜನರ ಹೃದಯವನ್ನು ನಾವು ಗೆದ್ದಿದ್ದೇವೆ ಎಂಬುದರ ಸಂಕೇತವಾಗಿದೆ.

ಜನರ ಹೃದಯ ಗೆಲ್ಲುವುದು ಸುಲುಭದ ಮಾತಲ್ಲ. ಜಾತಿ,ಮತ, ಪಂಥದ ಹಂಗಿಲ್ಲದೇ ಸಮಾಜದ ಎಲ್ಲ ಜನಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಪಕ್ಷದ ಟಿಕೆಟ್ ಹಂಚಿಕೆ ಮಾಡಲಾಗಿದೆ. ಚಾಲಕನಾಗಲಿ, ರೈತನಾಗಲಿ, ದಲಿತನಾಗಲಿ, ಬಡವನಾಗಲಿ ಪ್ರತಿಯೊಬ್ಬರಿಗೂ ಅವರದೇ ಆದ ಹಕ್ಕುಗಳಿರುತ್ತವೆ. ಟಿಕೆಟ್ ಹಂಚಿಕೆ ಮಾಡುವಾಗ ಇದೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂಬ ಸಮಾಧಾನ, ತೃಪ್ತಿ ನನಗಿದೆ ಎಂದು ಡಾ.ನೌಹೀರಾ ಶೇಕ್ ಹೇಳಿದ್ದಾರೆ.

ಈಗಾಗಲೇ ಬಿ.ಫಾರಂ ಪಡೆದ ಅಭ್ಯರ್ಥಿಗಳು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರಾದ ಆಕಾಂಕ್ಷಿತರ ಜತೆಗೂಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಗೆಲುವಿಗೆ ಶ್ರಮಿಸುವಂತೆ ಅವರು ಮನವಿ ಮಾಡಿದ್ದಾರೆ.  ನಾಮಪತ್ರ ಭರ್ತಿ ಸೇರಿದಂತೆ ಅಗತ್ಯ ಇರುವ ಕಡೆ ಪಕ್ಷದ ಕಾನೂನು ಘಟಕದ ನೆರವು ಪಡೆದುಕೊಳ್ಳುವಂತೆ ಅಭ್ಯರ್ಥಿಗಳಿಗೆ ಹಾಗೂ ಪಕ್ಷದ ಮುಖಂಡರಿಗೆ ಅವರು ಸೂಚಿಸಿದ್ದಾರೆ.

ಹಣ, ಹೆಂಡ ಸೇರಿದಂತೆ ಯಾವುದೇ ಆಮೀಷಕ್ಕೆ ಮತದಾರರು ಬಲಿಯಾಗದೇ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಎಂಇಪಿ ಅಭ್ಯರ್ಥಿಗಳ ವಜ್ರದ ಗುರುತಿಗೆ ಮತಚಲಾಯಿಸುವ ಮೂಲಕ ಉಜ್ವಲ ಕರ್ನಾಟಕ ನಿರ್ಮಾಣಕ್ಕೆ ಹಾಗೂ ಪರಿಶುದ್ಧ ಜನಪರ ರಾಜಕಾರಣಕ್ಕೆ ಸಹಕರಿಸುವಂತೆ ಮನವಿ ಡಾ.ನೌಹೀರಾ ಶೇಕ್ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ