
ಬೆಂಗಳೂರು,ಏ.23- ಹೈವೋಲ್ಟೇಜ್ ಕ್ಷೇತ್ರಗಳಾದ ಚಾಮುಂಡೇಶ್ವರಿ, ವರುಣಾದಲ್ಲಿ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಬೆವರಳಿಸುತ್ತಿದ್ದಾರೆ.
ಮೂವರು ಈ ಎರಡೂ ಕ್ಷೇತ್ರಗಳಲ್ಲಿ ಇಂದು ಬೀಡಬಿಟ್ಟು ಪ್ರಚಾರದ ಅಖಾಡದಲ್ಲಿ ಫೈಟ್‍ಗಿಳಿದಿದ್ದಾರೆ. ಶತಾಯ ಗತಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಅವರನ್ನು ಎರಡೂ ಕ್ಷೇತ್ರಗಳಲ್ಲಿ ಸೋಲಿಸಬೇಕೆಂದು ತಂತ್ರ ಹೆಣೆದಿರುವ ಯಡಿಯೂರಪ್ಪ , ಕುಮಾರಸ್ವಾಮಿ ಅವರು ಬಾರೀ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಎರಡೂ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ರಣತಂತ್ರ ರೂಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ವಿಜಯೇಂದ್ರನ ಪರವಾಗಿ ವರುಣಾದ ಹಲವು ಹಳ್ಳಿಗಳಿಗೆ ತೆರಳಿ ತಮ್ಮ ಪುತ್ರನ ಪರ ಪ್ರಚಾರ ಮಾಡಿದರು. ವ್ಯಾಪಕ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವರುಣಾ -ಚಾಮುಂಡೇಶ್ವರಿ ಎರಡರಲ್ಲೂ ಕಾಂಗ್ರೆಸ್ ಸೋಲಲಿದೆ. ಈ ಮೂಲಕ ಸಿದ್ದರಾಮಯ್ಯನವರ ಆಡಳಿತ ಪತನವಾಗಲಿದೆ ಎಂದು ಗುಡುಗಿದರು.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಎಂದಿನಂತೆ ಅಬ್ಬರದ ಪ್ರಚಾರ ನಡೆಸಿದರು. ಇಂದು ಕೂಡ ಚಾಮುಂಡೇಶ್ವರಿಯ ಹಲವು ಹಳ್ಳಿಗಳಿಗೆ ತೆರಳಿದಾಗ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ,ಬಾದಾಮಿಯಲ್ಲಿ ನಾನು ಗೆಲ್ಲುತ್ತೇನೆ. ವರುಣಾದಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಾದಾಮಿ ಕ್ಷೇತ್ರದಲ್ಲಿ ನಾನು ಪ್ರಚಾರಕ್ಕೆ ಹೋಗುವುದೇ ಇಲ್ಲ. ಅಲ್ಲಿ ಜಯಗಳಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ, ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವು ಸಾಧಿಸುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಯಾರೂ ಸ್ಟಾರ್ ಪ್ರಚಾರಕರು ಬರುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಕುಮಾರಸ್ವಾಮಿ ಅವರು ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವನ್ನು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಿನ ಭೀತಿಯಿಂದ ಬಾದಾಮಿಗೆ ಪಲಾಯನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.