ಕಾಂಗ್ರೆಸ್ ನಾಯಕರಿಂದ ಸಂವಿಧಾನ ಉಳಿಸಿ ಎಂದು ಮೊಸಳೆ ಕಣ್ಣೀರು ಹಾಕುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ: ಕೇಂದ್ರ ಸಚಿವ ಅನಂತಕುಮಾರ್ ವ್ಯಂಗ್ಯ

ಬೆಂಗಳೂರು, ಏ.23- ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಲು ಕಾರಣರಾಗಿದ್ದ ಕಾಂಗ್ರೆಸ್ ನಾಯಕರು ಇಂದು ಸಂವಿಧಾನ ಉಳಿಸಿ ಎಂದು ಮೊಸಳೆ ಕಣ್ಣೀರು ಹಾಕುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಎಂದು ಕೇಂದ್ರ ಸಚಿವ ಅನಂತಕುಮಾರ್ ವ್ಯಂಗ್ಯವಾಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅಂದಿನ ಪ್ರಧಾನಿ ದಿ.ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ರಾಷ್ಟ್ರದಲ್ಲಿ ಹೇರಿದರು. ಆದರೆ ಇಂದು ಅದೇ ಕಾಂಗ್ರೆಸ್ಸಿಗರು ಸಂವಿಧಾನ ಉಳಿಸುತ್ತೇವೆ ಎಂದು ಆಂದೋಲನಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಾಯಕರು ಹತಾಶೆಗೊಳಗಾಗಿ ಸಾಂವಿಧಾನಿಕ ಹುದ್ದೆಗಳನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಸಂವಿಧಾನಿಕ ನಡವಳಿಕೆಯೇ ಗೊತ್ತಿಲ್ಲ. ಹಾಗಾಗಿಯೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ವಿಚಾರದಲ್ಲಿ ರಾಜ್ಯಸಭೆಯ ಸಭಾಧ್ಯಕ್ಷರಾಗಿರುವ ಉಪರಾಷ್ಟ್ರಪತಿಗಳ ನಿರ್ಧಾರವನ್ನೇ ಪ್ರಶ್ನಿಸುತ್ತಾರೆ ಎಂದು ಹರಿಹಾಯ್ದರು.

ರಾಷ್ಟ್ರಪತಿಗಳು ಕಾನೂನು ತಜ್ಞರು, ಹಾಲಿ ನ್ಯಾಯಮೂರ್ತಿಗಳು, ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಸಂವಿಧಾನ ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತಾರೆ. ಅವರ ತೀರ್ಮಾನವನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಕಾಂಗ್ರೆಸ್ ನಾಯಕರು ಉಪರಾಷ್ಟ್ರಪತಿಗಳ ಹುದ್ದೆಗೆ ಅಪಮಾನ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಇತ್ತೀಚೆಗೆ ಕಾಂಗ್ರೆಸ್ ನಾಯಕರ ನಡವಳಿಕೆ ಹೇಗಿದೆ ಎಂದರೆ ನಾವು ಮಾಡಿದ್ದೆಲ್ಲ ಸರಿ. ಇವರ ಪರವಾಗಿ ಯಾವುದೇ ತೀರ್ಪು ಇಲ್ಲವೇ ತೀರ್ಮಾನ ಬಾರದಿದ್ದರೆ ಅದು ಸರಿಯಿಲ್ಲ ಎಂದು ಅಪಪ್ರಚಾರ ನಡೆಸುತ್ತಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗ ಮಂಡಿಸಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ ಎಂದು ಅನಂತ್‍ಕುಮಾರ್ ಪ್ರಶ್ನಿಸಿದರು.

ಸಿದ್ದರಾಮಯ್ಯ ಪಲಾಯನವಾದಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಅನಂತಕುಮಾರ್, ಚಾಮುಂಡೇಶ್ವರಿಯಲ್ಲಿ ಸೋಲಿನ ಭೀತಿ ಎದುರಿಸುತ್ತಿರುವ ಮುಖ್ಯಮಂತ್ರಿಯವರು ಬಾದಾಮಿಗೆ ಪಲಾಯನ ಮಾಡುತ್ತಿದ್ದಾರೆ. ಅಲ್ಲಿಯೂ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸಿದರು.

ಸಿದ್ದರಾಮಯ್ಯನವರು 30 ವರ್ಷಗಳಿಂದ ಚಾಮುಂಡೇಶ್ವರಿಯಲ್ಲಿ ರಾಜಕೀಯ ಮಾಡಿದಂತೆ ಮೋದಿಯವರು ಬರೋಡದಲ್ಲಿ ಚಿಲ್ಲರೆ ರಾಜಕೀಯ ಮಾಡಲಿಲ್ಲ. ಸೋಲಿನ ಭೀತಿಗೆ ಒಳಗಾಗಿರುವ ಸಿದ್ದರಾಮಯ್ಯ ಅರೆಬೆಂದ ರಾಜಕೀಯ ವಿಶ್ಲೇಷಣೆ ಮಾಡಲು ಹೊರಟಿದ್ದಾರೆ. ಆದರೆ ಎರಡೂ ಕ್ಷೇತ್ರಗಳಲೂ ್ಲ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಪದ್ಮನಾಭನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಶ್ರೀನಿವಾಸ್ ಪಕ್ಷಾಂತರ ಮಾಡುವುದರಲ್ಲಿ ಎತ್ತಿದ ಕೈ. ಅವರು ನನಗೆ ಗುರು ಅಲ್ಲ. ಅವರಿಗೆ ಗುರಿಯೂ ಇಲ್ಲ. ಬೇರೆ ಬೇರೆ ಪಕ್ಷಗಳಿಂದ ವಲಸೆ ಬಂದವರು ನನಗೆ ಗುರುವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಎಂ.ಶ್ರೀನಿವಾಸ್ ಎದುರಿಸಿದ ಚುನಾವಣೆಗಳಲ್ಲಿ ಐದು ಬಾರಿ ಠೇವಣಿ ಕಳೆದುಕೊಂಡಿದ್ದಾರೆ. ಈ ಬಾರಿಯೂ ಪದ್ಮನಾಭನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವುದು ಖಚಿತ ಎಂದು ಹೇಳಿದರು.
ಕಾಂಗ್ರೆಸ್‍ನವರು ಶಾಂತಿನಗರದಲ್ಲಿ ಎನ್.ಎ.ಹ್ಯಾರೀಸ್‍ಗೆ ಟಿಕೆಟ್ ಕೊಡುವ ಮೂಲಕ ಗೂಂಡಾಗಿರಿ ರಾಜಕಾರಣವನ್ನು ಉತ್ತೇಜಿಸಿದ್ದಾರೆ. ಕೊನೆ ಗಳಿಗೆವರೆಗೂ ಮುಚ್ಚು ಮರೆ ಮಾಡಿ ಟಿಕೆಟ್ ನೀಡಲಾಗಿದೆ. ಆದರೂ ಹ್ಯಾರೀಸ್ ಸೋಲುವುದು ಖಚಿತ ಎಂದು ಭವಿಷ್ಯ ನುಡಿದರು.
ಈ ವೇಳೆ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ,ಮಾಜಿ ಸಚಿವ ದಿ.ಎಸ್.ರಮೇಶ್ ಅವರ ಪುತ್ರ ಪವನ್, ಮಂಡ್ಯ ಜಿಲ್ಲಾ ಪ್ರಮುಖ ಎಚ್.ಬಿ.ಮಹೇಶ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ