ರಾಜಕಾರಣ ಮಾಡುವಾಗ ಕಣ್ಣು , ಕಿವಿ, ತೆರೆದಿರಬೇಕು, ಬಾಯಿ ಮುಚ್ಚಿರಬೇಕು – ಬಿ.ಎಲ್.ಶಂಕರ್

ಚಿಕ್ಕಮಗಳೂರು,ಏ.22-ಸಾರ್ವಜನಿಕ ಬದುಕಿನಲ್ಲಿ ರಾಜಕಾರಣ ಮಾಡುವಾಗ ಕಣ್ಣು , ಕಿವಿ, ತೆರೆದಿರಬೇಕು, ಬಾಯಿ ಮುಚ್ಚಿರಬೇಕು. ಆದರೆ ಶಾಸಕ ಸಿ.ಟಿ.ರವಿ ಅವರ ಕಣ್ಣು, ಕಿವಿ ಮುಚ್ಚದೆ ಬಾಯಿ ತೆರೆದಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಟೀಕಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಕಪಿ ಮುಷ್ಠಿಯಲ್ಲಿ ಚಿಕ್ಕಮಗಳೂರು ಇದೆ. ಕಳೆದ ಮೂರು ಅವಧಿ ಗೆದ್ದು ಬಂದ ಶಾಸಕ ರವಿ ಶಾಶ್ವತವಾದ ಒಂದೇ ಒಂದು ಅಭಿವೃದ್ದಿ ಕೆಲಸ ಮಾಡಿಲ್ಲ. ಶಾಸಕರಿಗೆ ದೂರದೃಷ್ಟಿ ಕೊರತೆಯಿಂದ ಈ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಪ್ರವಾಸೋದ್ಯಮಕ್ಕೆ ಅತ್ಯಂತ ಪ್ರಾಶಸ್ತ್ಯವಾದ ಸೌಲಭ್ಯಕಲ್ಪಿಸುವಲ್ಲಿ ಎಡವಿದ್ದಾರೆ. ಯಾವುದೇ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಲ್ಲ. ಹೀಗಾಗಿ ತೆಂಗು, ಅಡಿಕೆ ಮರಗಳು ಒಣಗಿ ನಿಂತಿವೆ.ರಾಜ್ಯ ಭೂಪಟದಲ್ಲಿ ಚಿಕ್ಕಮಗಳೂರು ಒಂದು ಮುಖ್ಯ ಸ್ಥಾನಕ್ಕೆ ಬರಲು ಸಾಧ್ಯವಾಗಲಿಲ್ಲ.
ಟಿಕೆಟ್ ವಂಚಿತರಾದ ಗಾಯತ್ರಿ ಶಾಂತೇಗೌಡರ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟಿಸಿದ್ದಾರಲ್ಲ ಎಂದು ಪ್ರಶ್ನಿಸಿದಾಗ, ನಾನಾಗಲಿ, ಗಾಯತ್ರಿ ಶಾಂತೇಗೌಡರಾಗಲಿ ಟಿಕೆಟ್‍ಗೆ ಅರ್ಜಿ ಹಾಕಿರಲಿಲ್ಲ. ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಮಾಡಿದೆ.ಇರುವ ವಿಚಾರವನ್ನು ಕುಳಿತು ಮಾತನಾಡಿ, ಭಿನ್ನಾಭಿಪ್ರಾಯನ್ನು ಬಗೆಹರಿಸಿಕೊಂಡಿದ್ದೇವೆ. ಎಲ್ಲರೂ ಒಟ್ಟಿಗೆ ಮತ ಯಾಚಿಸಿ ಜಿಲ್ಲೆ ಐದು ವಿಧಾನಸಭಾ ಕ್ಷೇತ್ರಗಳ ಗೆಲುವಿಗೆ ಪಣ ತೊಟ್ಟಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಗಾಯತ್ರಿ ಶಾಂತೇಗೌಡ ಮಾತನಾಡಿ, ನಾವು ಆಕಾಂಕ್ಷಿಯಾಗಿದ್ದು ನಿಜ. ಹೈಮಾಂಡ್ ತೀರ್ಮಾನಕ್ಕೆ ಬದ್ದವಾಗಿದ್ದು, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ಮಾಜಿ ಸಚಿವ ಸಿ.ಆರ್.ಸಗೀರ್ ಅಹಮ್ಮದ್ ಮಾತನಾಡಿ, ಈವರೆಗೆ ಶಾಸಕ ಸಿ.ಟಿ.ರವಿ ಅಭಿವೃದ್ಧಿಯಾಗಿದ್ದಾರೆ ಹೊರತು ನಗರ ಅಭಿವೃದ್ಧಿ ಮಾಡುವಲಿ ವಿಫಲರಾಗಿದ್ದಾರೆ ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಎಲ್.ವಿಜಯಕುಮಾರ್,ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್, ವಕ್ತಾರ ಎಂ.ಸಿ.ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ