ನವದೆಹಲಿ, ಏ.22-ಚೀನಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ(ಎಸ್ಸಿಒ) ಸಮ್ಮೇಳನದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯಾವುದೇ ರೀತಿಯ ದ್ವಿಪಕ್ಷೀಯ ಮಾತುಕತೆಗಳು ನಡೆಯುವ ಸಾಧ್ಯತೆ ಇಲ್ಲ.
ಎಸ್ಸಿಒ ಸಮ್ಮೇಳನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಾಕಿಸ್ತಾನದ ತಮ್ಮ ಸಹವರ್ತಿಗಳು ಅಥವಾ ಉನ್ನತಾಧಿಕಾರಿಗಳ ಜೊತೆ ಯಾವುದೇ ರೀತಿಯ ದ್ವಿಪಕ್ಷೀಯ ಚರ್ಚೆ ನಡೆಸುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಏಪ್ರಿಲ್ 24ರಂದು ವಿದೇಶಾಂಗ ಸಚಿವರ ಸಭೆ ನಡೆಯಲಿದ್ದು, ನಿನ್ನೆಯಿಂದ ಸುಷ್ಮಾ ಚೀನಾ ಪ್ರವಾಸ ಕೈಗೊಂಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರೂ ಕೂಡ ರಕ್ಷಣಾ ಸಚಿವರ ಮಟ್ಟದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರಿಬ್ಬರು ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂಬ ವರದಿಗಳಿತ್ತು. ಆದರೆ ಅದನ್ನು ಉನ್ನತ ಮೂಲಗಳು ತಳ್ಳಿ ಹಾಕಿವೆ.
ಪಠಾಣ್ ಕೋಟ್ ವಾಯುನೆಲೆ ಹಾಗೂ ಜಮ್ಮು-ಮತ್ತು ಕಾಶ್ಮೀರದ ಉರಿ ವಲಯದ ಮೇಲೆ ಪಾಕಿಸ್ತಾನ ಕೃಪಾಪೆÇೀಷಿತ ಭಯೋತ್ಪಾದಕರು ದಾಳಿ ನಡೆಸಿದ ನಂತರ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಗಡಿಯಲ್ಲಿ ಉದ್ವಿಗ್ನ ವಾತಾವರಣ ನೆಲೆಗೊಂಡಿದೆ.