ಎರಡು ಮಹತ್ವದ ಸುಗ್ರೀವಾಜ್ಞೆಗಳಿಗೆ ನಿನ್ನೆ ತಡರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ:

ನವದೆಹಲಿ, ಏ.22-ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರನ್ನು ನೇಣುಗಂಬಕ್ಕೆ ಏರಿಸಲು ಹಾಗೂ ಬ್ಯಾಂಕುಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರ್ಥಿಕ ವಂಚಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನೆರವಾಗುವ ಎರಡು ಮಹತ್ವದ ಸುಗ್ರೀವಾಜ್ಞೆಗಳಿಗೆ ನಿನ್ನೆ ತಡರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದಾರೆ. ರಾಷ್ಟ್ರಪತಿ ಅವರ ಅಂಕಿತದಿಂದಾಗಿ ಈ ಎರಡು ಹೊಸ ಕಾನೂನುಗಳು ದೇಶದಲ್ಲಿ ಜಾರಿಗೆ ಬರಲಿದೆ.
12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಮಹತ್ವದ ಸಭೆ ಸಮ್ಮತಿಸಿತ್ತು. ಕತುವಾ ಮತ್ತು ಉನ್ನಾವೋ ಅತ್ಯಾಚಾರ ಪ್ರಕರಣಗಳಿಗೆ ದೇಶಾದ್ಯಂತ ಭಾರೀ ಆಕ್ರೋಶ ಮತ್ತು ಪ್ರತಿಭಟನೆಗಳು ವ್ಯಕ್ತವಾದ ನಂತರ ಎಚ್ಚೆತ್ತುಕೊಂಡ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿತು.
ಇದಲ್ಲದೇ, ಬ್ಯಾಂಕುಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯರಂಥ ಆರ್ಥಿಕ ವಂಚಕರಿಗೆ ಸೇರಿದ ಆಸ್ತಿಗಳನ್ನು ಸರ್ಕಾರವು ಸುಲಭವಾಗಿ ಸ್ವಾಧೀನ ಮಾಡಿಕೊಳ್ಳಲು ಅನುಕೂಲವಾಗುವ, ದೇಶಬಿಟ್ಟು ಪರಾರಿಯಾದ ಆರ್ಥಿಕ ಅಪರಾಧಿಗಳ ವಿರುದ್ಧದ ಅದ್ಯಾದೇಶ-2018ಕ್ಕೆ ಕೇಂದ್ರ ಸಂಪುಟ ಅಂಗೀಕಾರ ನೀಡಿತ್ತು.
ಈ ಎರಡು ಮಹತ್ವದ ಸುಗ್ರೀವಾಜ್ಞೆಗಳನ್ನು ಕೇಂದ್ರ ಸರ್ಕಾರ ರಾಷ್ಟ್ರಪತಿ ಅವರ ಅನುಮೋದನೆಗಾಗಿ ಸಲ್ಲಿಸಿತ್ತು, ನಿನ್ನೆ ತಡರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಎರಡೂ ಅದ್ಯಾದೇಶಗಳಿಗೆ ಅಂಕಿತ ಹಾಕಿದ್ದಾರೆ. ಹಾಗಾಗಿ ಇನ್ನು ಮುಂದೆ ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನಿಶ್ಚಿತ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ