ಕಾಂಗ್ರೆಸ್ 11 ಮಂದಿಯ 2ನೇ ಹಂತದ ಪಟ್ಟಿ ಬಿದುಗಧೆ

ಬೆಂಗಳೂರು, ಏ.22-ಕಾಂಗ್ರೆಸ್ 2ನೇ ಹಂತದ ಪಟ್ಟಿಯಲ್ಲಿ 11 ಮಂದಿಗೆ ಟಿಕೆಟ್ ನೀಡುವ ಮೂಲಕ 223 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ. ಮಂಡ್ಯ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ್ದರು ಅಂಬರೀಶ್ ಸ್ಪರ್ಧಿಸುವ ಬಗ್ಗೆ ಗೊಂದಲ ಇರುವುದರಿಂದ ಇನ್ನೂ ಅತಂತ್ರ ಸ್ಥಿತಿ ಇದೆ.

ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಲು ಅವಕಾಶ ಗಿಟ್ಟಿಸಿದ್ದಾರೆ.
ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದ ಟಿಕೆಟ್ ನೀಡಿದ್ದು, ಈ ಮೊದಲು ಘೋಷಿಸಲಾಗಿದ್ದ ಡಾ.ದೇವರಾಜ ಪಾಟೀಲ್ ಅವರ ಹೆಸರನ್ನು ಹಿಂಪಡೆದಿದೆ. ಆ ಕ್ಷೇತ್ರದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪ್ರಬಲ ಆಕಾಂಕ್ಷಿಯಾಗಿದ್ದು, ತಮಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಈಗ ಸಿದ್ದರಾಮಯ್ಯ ಅವರು ಕಣಕ್ಕಿಳಿಯುವ ಮೂಲಕ ರಾಜಕೀಯ ರಂಗೇರಿದೆ.
ಬಾದಾಮಿ ಸೇರಿದಂತೆ ಜಗಳೂರು, ಮಡಿಕೇರಿ, ತಿಪಟೂರು, ಮಲ್ಲೇಶ್ವರಂ, ಪದ್ಮನಾಭನಗರ ಕ್ಷೇತ್ರಗಳಿಗೆ ಈ ಮೊದಲು ನೀಡಿದ್ದ ಟಿಕೆಟ್‍ನ್ನು ಹಿಂಪಡೆಯಲಾಗಿದ್ದು, ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ.
ಪುತ್ರನ ಗಲಾಟೆಯಿಂದಾಗಿ ತೊಂದರೆಗೆ ಸಿಲುಕಿದ್ದ ಹಾಲಿ ಶಾಸಕ ಎನ್.ಎ.ಹ್ಯಾರೀಸ್ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಿಸದೆ ತಡೆಹಿಡಿಯಲಾಗಿತ್ತು. ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರೇ ಶಾಂತಿನಗರದಲ್ಲಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹರಡಿದ್ದವು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಹೈಕಮಾಂಡ್ ಅಂತಿಮವಾಗಿ ಎನ್.ಎ.ಹ್ಯಾರೀಸ್ ಅವರಿಗೆ ಶಾಂತಿನಗರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.
ಹಾಲಿ ಶಾಸಕರಾದ ಬಿ.ಬಿ.ಇನಾಂದಾರ್ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದರು ಎಂಬ ಕಾರಣಕ್ಕಾಗಿ ಮೊದಲ ಪಟ್ಟಿಯಲ್ಲಿಟಿಕೆಟ್ ಘೋಷಣೆಯಾಗಿರಲಿಲ್ಲ. ಎರಡನೇ ಪಟ್ಟಿಯಲ್ಲಿ ಅವರದೇ ಕ್ಷೇತ್ರವಾದ ಕಿತ್ತೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.
ಜಗಳೂರು ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಬೇಕೆಂಬ ಕಾರಣಕ್ಕಾಗಿ ಎ.ಎಲ್.ಪುಷ್ಪ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು. ಹಾಲಿ ಶಾಸಕ ಎಚ್.ಪಿ.ರಾಜೇಶ್ ಗಲಾಟೆ ಮಾಡಿದ್ದರಿಂದ ಮತ್ತು ಸಮೀಕ್ಷೆ ಕೂಡ ಅವರ ಪರವಾಗಿ ಬಂದಿದ್ದರಿಂದ ಪುಷ್ಪ ಅವರಿಗೆ ನೀಡಿದ್ದ ಟಿಕೆಟ್ ಹಿಂಪಡೆದು ಮತ್ತೆ ಎಚ್.ಪಿ.ರಾಜೇಶ್ ಅವರನ್ನೇ ಕಣಕ್ಕಿಳಿಸಲಾಗುತ್ತಿbದೆ.
ತಿಪಟೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಷಡಕ್ಷರಿ ಅವರಿಗೆ ಟಿಕೆಟ್ ತಪ್ಪಿಸಿ ಮಾಜಿ ಶಾಸಕ ಬಿ.ನಂಜಾಮರಿ ಅವರಿಗೆ ನೀಡಲಾಗಿತ್ತು. ಅಲ್ಲಿ ರಾತ್ರೋರಾತ್ರಿ ಪ್ರತಿಭಟನೆ ವ್ಯಕ್ತವಾಗಿದ್ದವು. ಮತ್ತು ಕೆಪಿಸಿಸಿ ನಡೆಸಿದ ಸಂಧಾನವೂ ವಿಫಲವಾಗಿದ್ದವು. ಅಂತಿಮವಾಗಿ ಹಾಲಿ ಶಾಸಕ ಷಡಕ್ಷರಿ ಅವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ.
ಮಲ್ಲೇಶ್ವರಂ ಕ್ಷೇತ್ರದಲ್ಲಿ ಸಚಿವ ಎಂ.ಆರ್.ಸೀತಾರಾಮ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಶ್ರೀಪಾದ ರೇಣು ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ವಕೀಲ ದಿವಾಕರ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು.
ಪದ್ಮನಾಭನಗರ ಕ್ಷೇತ್ರದಲ್ಲಿ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಗುರಪ್ಪ ನಾಯ್ಡು ಅವರಿಗೆ ಟಿಕೆಟ್ ನೀಡಲಾಗಿತ್ತು. ಈಗಾಗಲೇ ಅವರು ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಆದರೆ ಗುರಪ್ಪ ನಾಯ್ಡು ಅವರ ಬದಲಾಗಿ ಎರಡನೇ ಪಟ್ಟಿಯಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮಡಿಕೇರಿ ಕ್ಷೇತ್ರದಲ್ಲಿ ವಕೀಲ ಎಚ್.ಎಸ್.ಚಂದ್ರಮೌಳಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರೂ ಕೂಡ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಕೆ.ಪಿ.ಚಂದ್ರಕಲಾ ಅವರಿಗೆ ಟಿಕೆಟ್ ನೀಡಲಾಗಿದೆ. ಜಗಳೂರಿನಲ್ಲಿ ಮಹಿಳೆಗೆ ಟಿಕೆಟ್ ನೀಡಿದ್ದನ್ನು ಹಿಂಪಡೆದಿದ್ದರಿಂದ ಮಡಿಕೇರಿಯಲ್ಲಿ ಮಹಿಳೆಗೆ ಟಿಕೆಟ್ ನೀಡಿ ಹೊಂದಾಣಿಕೆ ಮಾಡಲಾಗಿದೆ.
ರಾಯಚೂರು ಕ್ಷೇತ್ರದಿಂದ ಮಾಜಿ ಸಂಸದ ಜಾಫರ್ ಶರೀಫ್ ಸಂಬಂಧಿ ಸೈಯ್ಯದ್ ಯಾಸೀನ್ ಅವರಿಗೆ ಸಿಂಧಗಿ ಕ್ಷೇತ್ರದಿಂದ ಮಲ್ಲಣ್ಣ ನಿಂಗಣ್ಣ ಸಾಲಿ, ನಾಗಠಾಣ ಕ್ಷೇತ್ರದಿಂದ ವಿಠ್ಠಲ್‍ದೊಂಡಿಬಾ ಕಟದೊಂಡ ಅವರಿಗೆ ಟಿಕೆಟ್ ನೀಡಲಾಗಿದೆ.
ಮೊದಲ ಪಟ್ಟಿಯಲ್ಲಿ ಪ್ರಕಟಗೊಳ್ಳದೆ ಇದ್ದ ಕಿತ್ತೂರು, ನಾಗಠಾಣ, ರಾಯಚೂರು, ಸಿಂಧಗಿ, ಶಾಂತಿನಗರ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಮೇಲುಕೋಟೆ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಶಾಸಕರಾಗಿದ್ದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಪುತ್ರ ದರ್ಶನ್‍ಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.
ಈ ಮೂಲಕ 223 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮಂಡ್ಯ ಕ್ಷೇತ್ರದಲ್ಲಿ ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದರೆ ಅವರ ಆಪ್ತರಾದ ಅಮರಾವತಿ ಚಂದ್ರಶೇಖರ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಕ್ಷೇತ್ರ ಅಭ್ಯರ್ಥಿ ಬದಲಾವಣೆ
ಕಿತ್ತೂರು ಡಾ.ಡಿ.ಬಿ.ಇನಾಂದಾರ್
ಬಾದಾಮಿ ಸಿದ್ದರಾಮಯ್ಯ ಡಾ.ದೇವರಾಜ್ ಪಾಟೀಲ್
ನಾಗಠಾಣ (ಎಸ್‍ಸಿ) ವಿಠಲ್ ದೊಂಡಿಬಾ ಕಟದೊಂಡ
ಸಿಂದಗಿ ಮಲ್ಲಣ್ಣ ನಿಂಗಣ್ಣ ಸಾಲಿ
ರಾಯಚೂರು ಸೈಯದ್ ಯಾಸಿನ್
ಜಗಳೂರು (ಎಸ್‍ಟಿ) ಎಚ್.ಪಿ.ರಾಜೇಶ್ ಎ.ಎಲ್.ಪುಷ್ಪಾ
ತಿಪಟೂರು ಷಡಾಕ್ಷರಿ ನಂಜಾಮರಿ
ಮಲ್ಲೇಶ್ವರಂ ಕೆಂಗಲ್ ಶ್ರೀಪಾದ ರೇಣು ಎಂ.ಆರ್.ಸೀತಾರಾಂ
ಶಾಂತಿನಗರ ಎನ್.ಎ.ಹ್ಯಾರೀಶ್
ಪದ್ಮನಾಭನಗರ ಎಂ.ಶ್ರೀನಿವಾಸ್ ಡಾ.ಗುರ್ರಪ್ಪನಾಯ್ಡು
ಮಡಕೇರಿ ಶ್ರೀಮತಿ ಕೆ.ಪಿ.ಚಂದ್ರಕಲಾ ಎಚ್.ಎಸ್.ಚಂದ್ರಮೌಳಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ