ಬೆಂಗಳೂರು, ಏ.22-ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಹಾಗೂ ಎಚ್ಚರಿಕೆಯಿಂದ ಮತದಾನ ಮಾಡಿ ಎಂದು ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಕರೆ ನೀಡಿದರು.
ನಗರದ ಚೌಡಯ್ಯ ಮೆಮೋರಿಯಲ್‍ಹಾಲ್‍ನಲ್ಲಿ ಬೆಂಗಳೂರು ಅಪಾರ್ಟ್‍ಮೆಂಟ್ ಫೆಡರೇಷನ್ ಹಮ್ಮಿಕೊಂಡಿದ್ದ ರಾಜಕಾರಣಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಿ ಹಾಗೂ ಯೋಗ್ಯ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿ. ಮತದಾರರಿಗೆ ಏನೇನು ಅವಶ್ಯಕತೆ ಇದೆಯೋ ಅದನ್ನು ಕೇಳುವ ಹಕ್ಕು ಅವರಿಗಿದೆ ಎಂದರು.
ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ದೊಡ್ಡ ಅಪಾರ್ಟ್‍ಮೆಂಟ್‍ಗಳಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನೀರಿನ ಮಿತವ್ಯಯವಾಗಲಿದೆ. ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಅಪಾರ್ಟ್‍ಮೆಂಟ್ ಫೆಡರೇಷನ್‍ನವರು ನೀರು ಪೂರೈಕೆ ದರ ಅತಿ ಹೆಚ್ಚಾಗಿದ್ದು, ಇದನ್ನು ಯಾವುದೇ ಸರ್ಕಾರ ಬಂದರೂ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದಲ್ಲದೆ, ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣವನ್ನು ಅಪಾರ್ಟ್‍ಮೆಂಟ್‍ಗಳಿಗೆ ಕಡ್ಡಾಯಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸಂವಾದದಲ್ಲಿ ಬಿಜೆಪಿಯ ಶಾಸಕ ಅಶ್ವತ್ಥನಾರಾಯಣ, ಜೆಡಿಎಸ್‍ನ ತನ್ವೀರ್ ಅಹಮ್ಮದ್, ಎಎಪಿಯ ಪೃಥ್ವಿರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.