ಮಂಡ್ಯ ವಿಧಾನಸಭೆಗೆ ಸ್ಪರ್ಧಿಸಲು ಅಂಬರೀಶ್ ನಿರಾಕರಣೆ ಹಿನ್ನಲೆ: ಕಾಂಗ್ರೆಸ್‍ನಿಂದ ಗಣಿಗ ರವಿ ಕಣಕ್ಕಿಳಿಸುವ ಸಾಧ್ಯತೆ

ಬೆಂಗಳೂರು, ಏ.22-ಮಂಡ್ಯ ವಿಧಾನಸಭಾ ಚುನಾವಣೆಗೆ ಅಂಬರೀಶ್ ಸ್ಪರ್ಧಿಸಲು ನಿರಾಕರಿಸಿದ ಬೆನ್ನಲ್ಲೇ ಪರ್ಯಾಯ ಅಭ್ಯರ್ಥಿಯ ಹುಡುಕಾಟ ಆರಂಭಿಸಿರುವ ಕಾಂಗ್ರೆಸ್, ಗಣಿಗ ರವಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಕೊನೆ ಕ್ಷಣದವರೆಗೂ ಅಂಬಿ ಅವರ ಮನವೊಲಿಸಲು ಪ್ರಯತ್ನದ ನಡುವೆಯೇ ಗಣಿಗ ರವಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಮಾಜಿ ಶಾಸಕ ಆತ್ಮಾನಂದ ಮತ್ತು ಅಮರಾವತಿ ಚಂದ್ರಶೇಖರ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದು, ಯುವ ನಾಯಕ ಹೊಸ ಮುಖ ಗಣಿಗ ರವಿ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ ಎನ್ನಲಾಗಿದೆ.
ಅಂಬರೀಶ್ ಅವರನ್ನು ಸಂಪರ್ಕಿಸಲು ಕಾಂಗ್ರೆಸ್ ನಾಯಕರು ಈವರೆಗೂ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಂಬರೀಶ್ ಪಟ್ಟು ಹಿಡಿದಿದ್ದಾರೆ.
ಆದರೆ ತಮ್ಮ ಆಪ್ತರಾದ ಅಮರಾವತಿ ಚಂದ್ರಶೇಖರ್ ಅವರಿಗೇ ಟಿಕೆಟ್ ನೀಡಬೇಕೆಂಬ ಷರತ್ತನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಅಂಬರೀಶ್ ಅವರ ಸಂದೇಶದೊಂದಿಗೆ ನಿನ್ನೆ ಅಮರಾವತಿ ಚಂದ್ರಶೇಖರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುವಂತೆ ಅಮರಾವತಿ ಚಂದ್ರಶೇಖರ್ ಸಲಹೆ ನೀಡಿದಾಗ, ಸಿಟ್ಟಾಗಿದ್ದ ಸಿದ್ದರಾಮಯ್ಯ ಅವರು ಸಂಧಾನಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಯಾವುದಕ್ಕೂ ಅವರು ಒಪ್ಪುತ್ತಿಲ್ಲ. ಇನ್ನು ಅವರ ಇಷ್ಟ ಬಂದಂತೆ ಮಾಡಿಕೊಳ್ಳಲಿ. ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಈ ನಡುವೆ ಅಂಬರೀಶ್ ಅವರನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಸಿದ್ಧವಿಲ್ಲದ ಕಾಂಗ್ರೆಸ್, ಡಿ.ಕೆ.ಶಿವಕುಮಾರ್ ಮೂಲಕ ಸಂಧಾನ ಪ್ರಕ್ರಿಯೆ ಮುಂದುವರೆಸಿತ್ತು. ಅದರ ಫಲವಾಗಿ ಇಂದು ಮೈಸೂರಿನಲ್ಲಿ ಸಿದ್ದರಾಮಯ್ಯ, ಅಂಬರೀಶ್, ಡಿ.ಕೆ.ಶಿವಕುಮಾರ್ ಮೂರು ಜನ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಒಂದು ವೇಳೆ ಅಂಬರೀಶ್ ಒಪ್ಪಿದರೆ ಅಮರಾವತಿ ಚಂದ್ರಶೇಖರ್‍ಗೆ ಟಿಕೆಟ್ ನೀಡಿ ಚುನಾವಣಾ ಪ್ರಚಾರಕ್ಕೆ ಕರೆತರಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ನಡುವೆ ಇಂದು ಬೆಳಗ್ಗೆ ಗಣಿಗ ರವಿ, ಮುಖ್ಯಮಂತ್ರಿಯವರನ್ನು ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ತಮಗೇ ಟಿಕೆಟ್ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ. ನಾಳೆ ನಾಮಪತ್ರ ಸಲ್ಲಿಸುವುದಾಗಿ ಮುಖ್ಯಮಂತ್ರಿಯವರಿಗೆ ಗಣಿಗ ರವಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಈ ನಡುವೆ ಅಂಬರೀಶ್ ಅವರನ್ನು ಪ್ರಚಾರಕ್ಕೆ ಕರೆತರಬೇಕು, ಅವರು ಬೇರೆ ಪಕ್ಷದತ್ತ ಮುಖಮಾಡಲು ಅವಕಾಶ ಕೊಡಬಾರದು ಎಂಬ ಕಸರತ್ತುಗಳು ಕಾಂಗ್ರೆಸ್‍ನಲ್ಲಿ ಸಾಕಷ್ಟು ನಡೆಯುತ್ತಿವೆ.

ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ಕಾಂಗ್ರೆಸ್ ಮುಖಂಡರ ಮೇಲೆ ಮುನಿಸಿಕೊಂಡಿರುವ ಅಂಬರೀಶ್, ಒಂದು ವೇಳೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಡ್ಯ ಜಿಲ್ಲೆಯಲ್ಲಿ ನನ್ನ ಸ್ಥಾನಮಾನ ಏನು ಎಂಬುದನ್ನು ಈಗಲೇ ಸ್ಪಷ್ಟಪಡಿಸಬೇಕೆಂದು ಅಂಬರೀಶ್ ಪಟ್ಟುಹಿಡಿದಿದ್ದಾರೆ. ಆದರೆ ಬೇಡಿಕೆಗಳ ಬಗ್ಗೆ ಚರ್ಚೆಗೆ ಮುಖ್ಯಮಂತ್ರಿಗಳಿಗೆ ಅಲಭ್ಯವಾಗಿದ್ದರಿಂದ ಸಂಧಾನ ಯಶಸ್ವಿಯಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ