
ನವದೆಹಲಿ,ಏ.22-ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ನಲ್ಲಿ ಆತಂರಿಕ ಕಚ್ಚಾಟ ಇಲ್ಲ ಎಂದು ಪಕ್ಷದ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.
ವಾರ್ತಾ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟಕ್ಕೆ ರಾಜ್ಯದ ಎಲ್ಲ ಕಾಂಗ್ರೆಸ್ ಮುಖಂಡರು ಸಂಪೂರ್ಣ ಒಗ್ಗೂಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿದ ಮೊಯ್ಲಿ , ರಾಜ್ಯದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಆಕಾಂಕ್ಷಿಗಳು ಸ್ಪರ್ಧಿಸಲು ಬಯಸುವುದು ಸಹಜ. ಇಂಥ ಸನ್ನಿವೇಶದಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಉದ್ಭವಿಸುತ್ತವೆ. ಆದರೆ ಇದು ತಾತ್ಕಾಲಿಕ ಮಾತ್ರ. ಪರಿಸ್ಥಿತಿ ಮನಗಂಡ ನಂತರ ಟಿಕೆಟ್ ವಂಚಿತರು ಸಹಜ ಸ್ಥಿತಿಗೆ ಬರುತ್ತಾರೆ ಎಂದು ಅವರು ಹೇಳಿದರು.