ಬೆಂಗಳೂರು,ಏ.22
ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವ ಕುರಿತ ಪ್ರಶ್ನೆಗೆ ಕೊನೆಗೂ ಉತ್ತರ ದೊರೆ ತಿದ್ದು ಏ. 24ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಚಾಮುಂಡೇಶ್ವರಿ ಜತೆಗೆ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಲು ಹೈಕಮಾಂಡ್ ಅನುಮತಿ ದೊರೆತಿದ್ದು, ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಚರ್ಚಿಸಿ ಒಪ್ಪಿಗೆ ನೀಡಿದ್ದಾರೆ. ಆದರೆ ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ, ಸಿಎಂ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಜತೆಗೆ ಬಾಗಲಕೋಟೆ ಸಂಸದ ಗದ್ದಿಗೌಡರ್, ಮಾಜಿ ಸಂಸದ ವಿಜಯ ಸಂಕೇಶ್ವರ ಹೆಸರು ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಯಡಿಯೂರಪ್ಪ ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳಿವೆಯಾದರೂ ಪಕ್ಷದ ಮೂಲಗಳು ಇದನ್ನು ನಿರಾಕರಿಸಿವೆ. ಈ ನಡುವೆ ಜೆಡಿಎಸ್‌ನಿಂದ ಹನುಮಂತಪ್ಪ ಮಾವಿನಮರದ ಅವರು ಕುಮಾರಸ್ವಾಮಿ ಸಮ್ಮುಖದಲ್ಲಿ ಬಾದಾಮಿ ಕ್ಷೇತ್ರಕ್ಕೆ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.
ಈ ಮಧ್ಯೆ ಈಗಾಗಲೇ ಟಿಕೆಟ್ ಘೋಷಿಸಿದ್ದ ಬೆಂಗಳೂರಿನ ಪದ್ಮನಾಭನಗರದಲ್ಲಿ ಗುರಪ್ಪನಾಯ್ಡು ಬದಲಿಗೆ ಮಾಜಿ ಶಾಸಕ ಎಂ. ಶ್ರೀನಿವಾಸ್, ಜಗಳೂರಿನಲ್ಲಿ ಪುಷ್ಪಾ ಬದಲಿಗೆ ಎಚ್.ಪಿ. ರಾಜೇಶ್, ತಿಪಟೂರಿನಲ್ಲಿ ನಂಜಾಮರಿ ಬದಲಿಗೆ ಷಡಕ್ಷರಿ, ಮಲ್ಲೇಶ್ವರದಲ್ಲಿ ಎಂ.ಆರ್.ಸೀತಾರಾಂ ಬದಲಿಗೆ ಕೆಂಗಲ್ ಹನುಮಂತಯ್ಯ ಮೊಮ್ಮಗ ಶ್ರೀಪಾದ ರೇಣು ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.