ಬೆಂಗಳೂರು, ಏ.22-ಜಿದ್ದಾಜಿದ್ದಿನ ರಣರಂಗಕ್ಕೆ ಸಾಕ್ಷಿಯಾಗಲಿರುವ ಬಾಗಲಕೋಟೆ ಜಿಲ್ಲೆ ಬಾದಾಮಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಕಣಕ್ಕಿಳಿಯಲಿದ್ದಾರೆ.
ವಿಶೇಷವೆಂದರೆ ಸಿದ್ದರಾಮಯ್ಯನವರು ನಾಮಪತ್ರ ಸಲ್ಲಿಸಿದ ದಿನದಂದೇ ಅಂದರೆ ಮಂಗಳವಾರ ರಾಮುಲು ಭರ್ಜರಿ ಶಕ್ತಿ ಪ್ರದರ್ಶಿಸುವ ಮೂಲಕ ಬಾದಾಮಿಯಲ್ಲಿ ತಮ್ಮ ಉಮೇದುವಾರಿಕೆ ಮಾಡಲಿದ್ದಾರೆ.
ಮಂಗಳವಾರ ಸಿದ್ದರಾಮಯ್ಯನವರು 12.30ಕ್ಕೆ ನಾಮಪತ್ರ ಸಲ್ಲಿಸಿದರೆ ಬಳಿಕ ಭಾರೀ ಸಂಖ್ಯೆಯ ಬೆಂಬಲಿಗರೊಂದಿಗೆ ತೆರಳಿ ರಾಮುಲು ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.
ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಅನಂತಕುಮಾರ್ ಹೆಗಡೆ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.
ಮೂಲಗಳ ಪ್ರಕಾರ ಕೇಂದ್ರದ ಇನ್ನು ಕೆಲವು ಸಚಿವರು ಕೂಡ ಭಾಗಿಯಾಗುವ ಮೂಲಕ ಕಾಂಗ್ರೆಸ್ ವಿರುದ್ಧ ಶಕ್ತಿ ಪ್ರದರ್ಶಿಸಲು ಕಮಲ ಪಡೆ ಸಜ್ಜಾಗಿದೆ.
ಬಾದಾಮಿಗೆ ಈವರೆಗೂ ಯಾರೊಬ್ಬರಿಗೂ ಬಿ ಫಾರಂ ನೀಡಿಲ್ಲ. ಉದ್ಯಮಿ ವಿಜಯ ಸಂಕೇಶ್ವರ್, ಮಾಜಿ ಶಾಸಕ ಎಂ.ಕೆ.ಪಟ್ಟಣ ಶೆಟ್ಟಿ ಮತ್ತಿತರರಿಗೆ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆದಿತ್ತು. ಬಾದಾಮಿಯಿಂದ ಸಿದ್ದರಾಮಯ್ಯ ನಿನ್ನೆ ಸಂಜೆ ಸ್ಫರ್ಧಿಸುವುದಾಗಿ ಪ್ರಕಟಿಸುತ್ತಿದ್ದಂತೆ ಬಿಜೆಪಿ ಕೂಡ ತನ್ನ ಕಾರ್ಯತಂತ್ರವನ್ನು ಬದಲಿಸಿದೆ.
ಈವರೆಗೂ ಬಿಜೆಪಿಯಿಂದ ಬಾದಾಮಿಗೆ ಯಾರೊಬ್ಬರಿಗೂ ಬಿ ಫಾರಂ ನೀಡಿಲ್ಲ. ಸದ್ಯಕ್ಕೆ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಬಳಿಯೇ ಇದನ್ನು ಇಟ್ಟುಕೊಳ್ಳಲಾಗಿದೆ.
ಹೆಲಿಕಾಪ್ಟರ್ ಸನ್ನದ್ಧ :
ಸಿದ್ಧರಾಮಯ್ಯನವರ ಪ್ರತಿಯೊಂದು ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಬಿಜೆಪಿ ಮಂಗಳವಾರ ಅವರು ಬಾದಾಮಿಯಿಂದ ಸ್ಫರ್ಧಿಸಿದರೆ ತಕ್ಷಣವೇ ಅಲ್ಲಿಗೆ ತೆರಳಲು ಹೆಲಿಕಾಪ್ಟರ್ವೊಂದನ್ನು ಸನ್ನದ್ದದಲ್ಲಿಡಲಾಗಿದೆ.
ಕೊನೆಯ ಕ್ಷಣದವರೆಗೂ ಟಿಕೆಟ್ ಯಾರಿಗೆ ನೀಡಲಾಗುತ್ತದೆ ಎಂಬುದನ್ನು ಗೌಪ್ಯವಾಗಿಯೇ ಇಡಲಾಗಿದ್ದು , ಸಿಎಂ ಸ್ಪರ್ಧಿಸಿದರೆ ಕೂಡಲೇ ರಾಮುಲು ಇಲ್ಲವೇ ಸಂಕೇಶ್ವರ್ಗೆ ಬುಲಾವ್ ನೀಡಲು ಬಿಜೆಪಿ ಮುಂದಾಗಿದೆ.
ಕ್ಷಣ ಕ್ಷಣಕ್ಕೂ ಕುತೂಹಲವನ್ನು ತನ್ನತ್ತ ಸೆಳೆದಿರುವ ಬಾದಾಮಿ ವಿಧಾನಸಭಾ ಕ್ಷೇತ್ರ ಮುಂದಿನ ದಿನಗಳಲ್ಲಿ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ.