ಜೆಡಿಎಸ್‍ಅಭ್ಯರ್ಥಿಗಳ ಮೂರನೇ ಹಾಗೂ ಅಂತಿಮ ಪಟ್ಟಿ ನಾಳೆ ಬಿಡುಗಡೆ

ಬೆಂಗಳೂರು, ಏ.22-ರಾಜ್ಯ ವಿಧಾನಸಭೆ ಚುನಾವಣೆಗೆ ಜೆಡಿಎಸ್‍ಅಭ್ಯರ್ಥಿಗಳ ಮೂರನೇ ಹಾಗೂ ಅಂತಿಮ ಪಟ್ಟಿಯನ್ನು ನಾಳೆಯೊಳಗೆ ಬಿಡುಗಡೆ ಮಾಡಲಾಗುತ್ತದೆ. ಮೇ 12ರಂದು ಮತದಾನ ನಡೆಯಲಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.24 ಕಡೆಯ ದಿನವಾಗಿದೆ.
ಕೇವಲ ಎರಡು ದಿನ ಬಾಕಿ ಉಳಿದಿರುವುದರಿಂದ ಜೆಡಿಎಸ್ ವರಿಷ್ಠರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದಿದ್ದರೂ ಟಿಕೆಟ್ ಖಾತ್ರಿಯಾಗಿರುವವರಿಗೆ ಬಿ ಫಾರಂ ನೀಡುತ್ತಿದ್ದಾರೆ. ಹೀಗಾಗಿ ಸ್ಪರ್ಧೆ ಮಾಡುವವರು ತಮಗೆ ಅನುಕೂಲವಾದ ದಿನ ಹಾಗೂ ಸಮಯದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ.

ಮೂರನೇ ಪಟ್ಟಿಯಲ್ಲೂ ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದು ಬಂದಂತಹ ವಲಸಿಗರಿಗೂ ಆದ್ಯತೆ ನೀಡುವ ಸಾಧ್ಯತೆಗಳಿವೆ. ಈಗಾಗಲೇ ಪ್ರಕಟಿಸಿದ 57 ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕಲಾಗಿತ್ತು.

ಮೊದಲ ಹಂತದಲ್ಲೂ 126 ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರೀಯ ಪಕ್ಷಗಳಿಗಿಂತ ಮುಂಚೆಯೇ ಪ್ರಕಟವಾಗಿತ್ತು. ಆ ಪಟ್ಟಿಯಲ್ಲೂ ಕೆಲವೊಂದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಲಾಗಿದೆ.
ಬಾಕಿ ಉಳಿದಿರುವ 23 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಸಂಜೆ ಅಥವಾ ನಾಳೆ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಬಹುತೇಕ ಅಭ್ಯರ್ಥಿಗಳು ನಾಳೆಯೇ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ಯಲಹಂಕ, ಪುಲಿಕೇಶಿನಗರ, ಶಿವಾಜಿನಗರ, ಗೋವಿಂದರಾಜನಗರ, ವಿಜಯನಗರ, ಮಹದೇವಪುರ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ 23 ವಿಧಾನಸಭಾ ಕ್ಷೇತ್ರಗಳಿಗೆ ಜೆಡಿಎಸ್‍ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದನ್ನು ಬಾಕಿ ಉಳಿಸಿಕೊಂಡಿದೆ.

ಚುನಾವಣಾ ಪೂರ್ವ ಮೈತ್ರಿಯನ್ನು ಬಿಎಸ್‍ಪಿಯೊಂದಿಗೆ ಮಾಡಿಕೊಂಡಿದ್ದು, ಈಗಾಗಲೇ 20 ಕ್ಷೇತ್ರಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 204 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಜೆಡಿಎಸ್ ನಿರ್ಧರಿಸಿದೆ.
ಶತಾಯಗತಾಯ ಪ್ರಯತ್ನ ಪಟ್ಟು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜನಾರ್ಶೀವಾದ ಪಡೆದು ಅಧಿಕಾರಕ್ಕೆ ಬರಬೇಕೆಂಬ ಮಹದಾಸೆ ಹೊಂದಿದ್ದು, ಅದಕ್ಕೆ ಪೂರಕವಾಗಿ ಅಭ್ಯರ್ಥಿಗಳನ್ನು ಕೂಡ ಆಯ್ಕೆ ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ