ಬೆಂಗಳೂರು, ಏ.21- ಪ್ರಜಾಕೀಯ ಪಕ್ಷ ಆರಂಭಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಹೊಸ ಅಲೆ ಎಬ್ಬಿಸುವ ಆಲೋಚನೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ನಂತರ ಗೊಂದಲದಲ್ಲೇ ಪಕ್ಷದಿಂದ ಉಚ್ಛಾಟನೆಗೊಂಡು ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿಯೋದು ಅನುಮಾನವಾಗಿದೆ.
ಕಳೆದ ಅಕ್ಟೋಬರ್‍ನಲ್ಲಿ ಹತ್ತು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡು ತಮ್ಮ ಆತ್ಮೀಯರೊಂದಿಗೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಒಡಕು ಉಂಟಾಗಿ ಅದರಿಂದ ಹೊರ ಬಂದಿದ್ದರು.
ನಂತರ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಕೂಡ ಆರಂಭಿಸಿ ಅಭ್ಯರ್ಥಿಗಳನ್ನು ತಾವು ಸೇರಿದಂತೆ ತಮ್ಮ ಅಭಿಮಾನಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವ ಆಲೋಚನೆಯಲ್ಲಿದ್ದರು. ಸ್ವತಃ ಉಪೇಂದ್ರ ಅವರೇ ಬಸವನಗುಡಿ , ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ ಸೇರಿದಂತೆ ವಿವಿಧೆಡೆ ಸ್ಪರ್ಧಿಸುವ ಆಲೋಚನೆಯಲ್ಲಿದ್ದರು.
ಆದರೆ ಅವರೆಲ್ಲಾ ಆಸೆಗಳಿಗೆ ನಿರಾಸೆಯಾಗಿ ಈಗ ಚುನಾವಣೆ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪ್ರಜಾಕೀಯ ಪಕ್ಷಕ್ಕೆ ಮಾನ್ಯತೆ ಕೂಡ ಸಿಗದಿರುವುದು ಇದಕ್ಕೆ ಒಂದು ಕಾರಣವಾಗಿದೆ.
ಲೋಕಸಭಾ ಚುನಾವಣೆಯ ವೇಳೆಗೆ ಪ್ರಜಾಕೀಯ ಅಸ್ತಿತ್ವ ಸಿಗಲಿದ್ದು , ನಂತರ ನೋಡೋಣ ಎಂಬ ಭಾವನೆ ಅವರಲ್ಲಿ ಮೂಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಚಿತ್ರಗಳಿಗೆ ಸಹಿ ಹಾಕಿರುವ ಅವರು ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಚುನಾವಣಾ ರಂಗಕ್ಕೆ ಎಂಟ್ರಿ ಕೊಡುವುದು ನಿಶ್ಚಿತ ಎಂದು ಉಪೇಂದ್ರ ತಮ್ಮ ಆಪ್ತ ಬಳಗದಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.