ಬೆಂಗಳೂರು, ಏ.21-ನಟಿ ಪೂಜಾಗಾಂಧಿ, ಬಳ್ಳಾರಿಯ ಮುನ್ನ ಉದ್ಯಮಿ ವಿಜಯ್ ಘೋರ್ಪಡೆ ಮುಂತಾದವರು ಇಂದು ಜೆಡಿಎಸ್ ಸೇರ್ಪಡೆಯಾದರು.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ಯುವ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿಂದು ಪೂಜಾಗಾಂಧಿ ಸೇರಿದಂತೆ ಹಲವರು ಜೆಡಿಎಸ್ ಸೇರ್ಪಡೆಯಾದರು.
ನಂತರ ಮಾತನಾಡಿದ ನಟಿ ಪೂಜಾಗಾಂಧಿ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ಜೆಡಿಎಸ್ ಪಕ್ಷದಿಂದ. ನನ್ನ ತಪ್ಪು ನಿರ್ಧಾರಗಳಿಂದ ನಾನು ಜೆಡಿಎಸ್ ಬಿಟ್ಟಿದ್ದೆ. ಅದಕ್ಕಾಗಿ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಕ್ಷಮೆಯಾಚಿಸುತ್ತೇನೆ. ಜೆಡಿಎಸ್ ಪಕ್ಷ ನನಗೆ ಒಳ್ಳೆ ಫ್ಲಾಟ್ಫಾರಂ ಕೊಟ್ಟಿತ್ತು, ಒಳ್ಳೆ ಸ್ಥಾನಮಾನ ನೀಡಿತ್ತು ಎಂದು ಸ್ಮರಿಸಿಕೊಂಡರು.
ನಾನು ಯಾವುದೇ ಟಿಕೆಟ್ ಆಕಾಂಕ್ಷಿಯಾಗಿ ಜೆಡಿಎಸ್ಗೆ ಮರುಸೇರ್ಪಡೆಯಾಗಿಲ್ಲ. ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.
ನಾನು ಉತ್ತರ ಭಾರತದವಳಾಗಿದ್ದರೂ, ಕರ್ನಾಟಕ ನನ್ನ ಕರ್ಮಭೂಮಿ, ದೇವೇಗೌಡರು, ಕುಮಾರಸ್ವಾಮಿ ರೈತರ ಕಲ್ಯಾಣಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಅಭಿವೃದ್ಧಿಯ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತದೆ. ರಾಷ್ಟ್ರೀಯ ಪಕ್ಷಗಳು ವಿಭಜನೆ ಕೆಲಸ ಮಾಡುತ್ತವೆ ಎಂದು ಪೂಜಾಗಾಂಧಿ ಆರೋಪಿಸಿದರು.
ಕುಮಾರಸ್ವಾಮಿ, ದೇವೇಗೌಡರು ಜನಸಾಮಾನ್ಯರಿಗೆ ಸಿಗುತ್ತಾರೆ. ಆದರೆ ರಾಷ್ಟ್ರೀಯ ಪಕ್ಷಗಳ ನಾಯಕರು ಸುಲಭವಾಗಿ ಸಿಗುವುದಿಲ್ಲ ಎಂದು ಹೇಳಿದರು.
ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಪಕ್ಷದ ವರಿಷ್ಠರ ತೀರ್ಮಾನದಂತೆ ಪೂಜಾಗಾಂಧಿ ಸೇರಿದಂತೆ ಹಲವರು ಇಂದು ಪಕ್ಷ ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ ಜೆಡಿಎಸ ಪಕ್ಷದ ಪರ ಅಲೆ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.