ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆಯಾದರೂ, ಈ ವಿಷಯವನ್ನು ಸಿಎಂ ನೇರವಾಗಿ ಖಚಿತಪಡಿಸದೆ ಅಡ್ಡಗೋಡೆ ಮೇಲೆ ದೀಪವಿಡುವ ಮೂಲಕ ಗೊಂದಲ

ಬೆಂಗಳೂರು, ಏ.21-ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆಯಾದರೂ, ಈ ವಿಷಯವನ್ನು ಸಿಎಂ ನೇರವಾಗಿ ಖಚಿತಪಡಿಸದೆ ಅಡ್ಡಗೋಡೆ ಮೇಲೆ ದೀಪವಿಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ.

ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಎರಡು ದಿನ ಪ್ರಚಾರ ಮಾಡಿರುವ ಸಿದ್ದರಾಮಯ್ಯ ಅವರು ಏ.26ರ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಈ ನಡುವೆ ಏ.24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದೆ. ಬಾದಾಮಿಯಿಂದ ದೇವರಾಜ್ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಕೂಡ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಮತ್ತೇ ತಮಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಈ ಮೊದಲು ದೇವರಾಜ್ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆಯಾದಾಗ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸುವುದಿಲ್ಲ. ಚಾಮುಂಡೇಶ್ವರಿಯಲ್ಲಿ ಮಾತ್ರ ಸ್ಪರ್ಧಿಸುತ್ತಾರೆ ಎಂಬ ಸಂದೇಶ ರವಾನೆಯಾಗಿತ್ತು. ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹೈಕಮಾಂಡ್ ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧಿಸಲು ಒಪ್ಪಿಲ್ಲ ಎಂಬ ಮಾಹಿತಿ ಹೊರಬಂದಿದ್ದವು.

ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಮೈಸೂರು ಜಿಲ್ಲೆಗೆ ತೆರಳಿದ ಸಿದ್ದರಾಮಯ್ಯ ಐದು ದಿನಗಳ ಕಾಲ ಠಿಕಾಣಿ ಹೂಡಿದ್ದರು. ಎರಡು ಸ್ವಕ್ಷೇತ್ರ ಚಾಮುಂಡೇಶ್ವರಿ ಇನ್ನು ಮೂರು ದಿನ ತಮ್ಮ ಪುತ್ರ ಸ್ಪರ್ಧಿಸಿರುವ ವರುಣ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡರು.

ಇಂದು ಬೆಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ನಡುವೆ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದವು.
ಹೈಕಮಾಂಡ್, ಸಿದ್ದರಾಮಯ್ಯ ಅವರ ದ್ವಿಕ್ಷೇತ್ರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ಕಾರ್ಯಕ್ರಮವೊಂದರಲ್ಲಿ ಹರಸಾಹಸಪಟ್ಟರು.

ಮುಖ್ಯಮಂತ್ರಿಗಳ ಜೊತೆ ಖಾಸಗಿ ಹೊಟೇಲ್‍ನಲ್ಲಿ ಮುಖ್ಯಮಂತ್ರಿ ಮಾತುಗಳು ಎಂಬ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಣುಗೋಪಾಲ್, ತಮ್ಮ ಮಾತಿನಲ್ಲಿ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧಿಸುವುದಾದರೆ ಅವರ ವಿರುದ್ಧ ಯಡಿಯೂರಪ್ಪ ಸ್ಪರ್ಧಿಸುತ್ತಾರಂತೆ. ಅವರು ಸ್ಪರ್ಧೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಭಾವನಾತ್ಮಕ ನಂಟಿದೆ. ಆ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ದೃಢ ವಿಶ್ವಾಸವಿದೆ. ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದು ಹೈಕಮಾಂಡ್‍ನ ರಾಜಕೀಯ ತಂತ್ರಗಾರಿಕೆ. ಈ ಹಿಂದೆ ಮೋದಿಯವರು ಗುಜರಾತ್ ಮತ್ತು ವಾರಣಾಸಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು ಹೇಗೆ ರಾಜಕೀಯ ತಂತ್ರಗಾರಿಕೆಯೋ, ಈಗ ಸಿದ್ದರಾಮಯ್ಯ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ರಾಜಕೀಯ ತಂತ್ರಗಾರಿಕೆ ಯಾಗಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತರು.
ಇದರಿಂದ ಹೈಕಮಾಂಡ್ ದ್ವಿಕ್ಷೇತ್ರ ಸ್ಪರ್ಧೆಗೆ ಅಡ್ಡಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ವೇಣುಗೋಪಾಲ್ ತಮ್ಮದೇ ಧಾಟಿಯಲ್ಲಿ ಯತ್ನಿಸಿದರು. ಈ ನಡುವೆ ಬಾಗಲಕೋಟೆಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬಾದಾಮಿ ಕ್ಷೇತ್ರದಿಂಧ ಸ್ಪರ್ಧಿಸುವಂತೆ ಒತ್ತಡ ಹೇರಿದ್ದಾರೆ.

ಅವರಿಗೆ ಸಿದ್ದರಾಮಯ್ಯ ನೇರವಾಗಿ ಯಾವುದೇ ಉತ್ತರ ನೀಡದೆ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. ಇಂದು ಖಾಸಗಿ ಹೊಟೇಲ್‍ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಹೈಕಮಾಂಡ್ ಗ್ರೀನ್‍ಸಿಗ್ನಲ್ ಕೊಟ್ಟರೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದರು.

ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ತಮ್ಮ ವಿರುದ್ಧ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದೊಂದೇ ಕ್ಷೇತ್ರದಲ್ಲಲ್ಲ ದೇಶಾದ್ಯಂತ ನಾವು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ನಿನ್ನೆಯಷ್ಟೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದರು. ಅವರ ಪುತ್ರ ಯತೀಂದ್ರ ಕೂಡ ಫೇಸ್‍ಬುಕ್‍ನಲ್ಲಿ ಇದನ್ನು ಖಚಿತಪಡಿಸಿದ್ದರು. ಅದರ ಬೆನ್ನಲ್ಲೇ ಇಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಗೊಂದಲ ಉಂಟು ಮಾಡುವ ಪ್ರಯತ್ನ ನಡೆದಿದೆ.

ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಹೈಕಮಾಂಡ್ ಮತ್ತು ಜನರ ಒತ್ತಾಯದ ಮೇರೆಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ ಎಂಬ ಸಂದೇಶವನ್ನು ತಲುಪಿಸಲು ಈ ರೀತಿಯ ಗೊಂದಲ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ