ಎಂಇಪಿ ಪಕ್ಷದಿಂದ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ: ಕೆಪಿಸಿಸಿ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ವೈ.ಸಾಹೀದ್ ಅಹಮ್ಮದ್ ಆರೋಪ

ಬೆಂಗಳೂರು, ಏ.21-ಎಂಇಪಿ ಪಕ್ಷ ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಬಿಜೆಪಿ ಪರೋಕ್ಷವಾಗಿ ಬೆಂಬಲಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ವೈ.ಸಾಹೀದ್ ಅಹಮ್ಮದ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳ ಹಿಂದೆ ಹೈದರಾಬಾದ್‍ನಲ್ಲಿ ಅಸ್ತಿತ್ವಕ್ಕೆ ಬಂದ ಈ ಪಕ್ಷದ ಸಿದ್ಧಾಂತ ಜಾತ್ಯತೀತ ಎಂದು ಹೇಳುವ ಈ ಪಕ್ಷ ಪರೋಕ್ಷವಾಗಿ ಕೋಮುವಾದಿ ಪಕ್ಷಗಳಿಗೆ ಸಹಾಯ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ತ್ರಿವಳಿ ತಲಾಕ್ ಹಾಗೂ ಮೋದಿ ಅವರ ಕಾರ್ಯವೈಖರಿಯನ್ನು ಬಣ್ಣಿಸುತ್ತಾ ಅಲ್ಪಸಂಖ್ಯಾತ ಮಹಿಳೆಯರಲ್ಲಿ ಗೊಂದಲದ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮಹಿಳೆಯರ ಮತಗಳನ್ನು ಪಡೆದು ಕೋಮುವಾದಿ ಪಕ್ಷಕ್ಕೆ ಸಹಾಯ ಮಾಡುತ್ತಿರುವುದು ಇವರ ಅಜೆಂಡಾ ಆಗಿದೆ ಎಂದು ಕಿಡಿಕಾರಿದರು.

ಇತ್ತೀಚಿನ ದಿನಗಳಲ್ಲಿ ನಗರದ ಖಾಸಗಿ ಹೊಟೇಲ್‍ನಲ್ಲಿ ಆಲ್ ಜಮಾತುಜ್ ಜೋಹ್ರಾ ಎಜುಕೇಷನ್ ಟ್ರಸ್ಟ್ ವತಿಯಿಂದ ಶಿಕ್ಷಣ ಮತ್ತು ವೃತ್ತಿಪರ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಮೂಲ ವಿಚಾರದ ಬಗ್ಗೆ ಚರ್ಚೆಯಾಗದೆ ರಾಜಕೀಯ ಕೆಸರೆರಚಾಟದ ವೇದಿಕೆಯಾಗಿತ್ತು. ಎಂಇಪಿ ಪಕ್ಷದ ಅಧ್ಯಕ್ಷೆಯಾದ ನೋಹೆರಾ ಷೇಕ್‍ರವರ ಆಪ್ತರಾದ ಸುಹೇಲ್ ಖಂಡವಾನಿ ಇವರು ಭಾಗವಹಿಸಿದ್ದು ಮುಂಬೈ ಬಿಜೆಪಿ ಪಕ್ಷದ ಮುಖಂಡ ಎಂದು ತಿಳಿದುಬಂದಿದೆ ಎಂದರು.

ಆದ್ದರಿಂದ ಮತವನ್ನು ಚಲಾಯಿಸುವಾಗ ರಾಜ್ಯದ ಅಭಿವೃದ್ಧಿ ಹಾಗೂ ಸಾಮರಸ್ಯ ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿ ಮಾಡಲು ಪಣ ತೊಟ್ಟಿರುವ ಪಕ್ಷಗಳಿಗೆ ಬೆಂಬಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ