ಬೆಂಗಳೂರು, ಏ.21-ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಸಚಿವ ಅಂಬರೀಶ್ ನಿರಾಕರಿಸುವ ಮೂಲಕ ಕಾಂಗ್ರೆಸ್ಗೆ ಬಿಗ್ ಶಾಕ್ ನೀಡಿದ್ದಾರೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ನನ್ನ ಮೇಲೆ ಏಕೆ ಒತ್ತಡ ತರುತ್ತೀರಿ ಎಂದು ಅಂಬರೀಶ್ ಹೇಳಿದ್ದಾರೆ.
ಸಚಿವ ಕೆ.ಜೆ.ಜಾರ್ಜ್, ಅಮರಾವತಿ ಚಂದ್ರಶೇಖರ್ ಇಂದು ಅಂಬರೀಶ್ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅವರನ್ನು ಭೇಟಿಯಾಗದೆ ಅಂಬರೀಶ್ ಮನೆಯಿಂದ ತೆರಳಿದ್ದಾರೆ. ಅಲ್ಲದೆ, ತೀವ್ರ ಬೇಸರಗೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಾನು ವಸತಿ ಸಚಿವನಾಗಿದ್ದಾಗ ಏಕಾಏಕಿ ಸಚಿವ ಸ್ಥಾನದಿಂದ ನನ್ನನ್ನು ತೆಗೆದು ಹಾಕಿದಿರಿ. ಉತ್ತಮವಾಗಿ ಕೆಲಸ ಮಾಡಿದ್ದಕ್ಕೆ ನನಗೆ ಪ್ರಶಸ್ತಿ ಸಿಕ್ಕಿತ್ತು. ಅದ್ಯಾವುದನ್ನೂ ಪರಿಗಣಿಸದೆ ನನ್ನನ್ನು ಸಚಿವ ಸ್ಥಾನದಿಂದ ತೆಗೆದುಹಾಕಲಾಯಿತು. ಈಗ ಚುನಾವಣೆಗೆ ಸ್ಪರ್ಧಿಸುವಂತೆ ಏಕೆ ಒತ್ತಡ ಹೇರುತ್ತಿದ್ದೀರಿ. ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ರೆಬಲ್ ಸ್ಟಾರ್ ರೆಬಲ್ ಆಗಿ ಹೇಳಿದ್ದಾರೆ.
ಇದರಿಂದ ಸಂಧಾನಕ್ಕೆ ತೆರಳಿದವರು ಬರಿಗೈಲಿ ವಾಪಸ್ಸಾಗಿದ್ದಾರೆ. ಅಂಬರೀಶ್ ಅವರಿಗೆ ಬಿ ಫಾರಂ ಕೊಟ್ಟಾಗಿದೆ. ಸ್ಪರ್ಧಿಸುವುದು ಬಿಡುವುದು ಅವರಿಗೆ ಬಿಟ್ಟ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದರು.
ಮಂಡ್ಯದಿಂದ ಅಂಬರೀಶ್ ಅವರಿಗೆ ಟಿಕೆಟ್ ಘೋಷಿಸಿ ಬಿ ಫಾರಂ ಪಡೆಯಲು ಸೂಚಿಸಿದ್ದರು. ಅವರು ಬಿ ಫಾರಂ ಪಡೆದಿರಲಿಲ್ಲ. ಈಗ ಸ್ಪರ್ಧೆಗೆ ನಿರಾಕರಣೆ ಮಾಡಿರುವುದರಿಂದ ಮಂಡ್ಯದ ಕಾಂಗ್ರೆಸ್ನಲ್ಲಿ ತೀವ್ರ ಗೊಂದಲ ಉಂಟಾಗಿದೆ.