ಮತೀಯ ದ್ವೇಷ ಸೃಷ್ಟಿಸಲು ಯತ್ನಿಸಿರುವ ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು,ಏ.20- ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಭಾಷಣ ಮಾಡಿ ಮತೀಯ ದ್ವೇಷ ಸೃಷ್ಟಿಸಲು ಯತ್ನಿಸಿರುವ ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕೆಪಿಸಿಸಿ ಕಾರ್ಯದರ್ಶಿ ವೆಂಕಟೇಶ್ವರ್, ಎಐಸಿಸಿ ವಕ್ತಾರರಾದ ಸೂರಜ್ ಹೆಗ್ಡೆ , ಮತ್ತಿತರರ ನಿಯೋಗ ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿ ಮಾಡಿ ದೂರು ನೀಡಿದೆ.

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸಂಜಯ್ ಪಾಟೀಲ್ ಮುಂದಿನ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಇವರು ಏ.17ರಂದು ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಮತೀಯ ದ್ವೇಷವನ್ನು ಹುಟ್ಟು ಹಾಕುವಂತಹ ಮಾತುಗಳನ್ನಾಡಿದ್ದಾರೆ.
ಈ ಚುನಾವಣೆ ನೀರು, ರಸ್ತೆಯಂತಹ ಅಭಿವೃದ್ದಿ ವಿಷಯಗಳ ಆಧಾರದ ಮೇಲೆ ನಡೆಯುವುದಿಲ್ಲ. ಹಿಂದು ಮತ್ತು ಮುಸ್ಲಿಂ, ರಾಮಮಂದಿರ-ಬಾಬರಿ ಮಸೀದಿ ನಡುವಿನ ವಿಷಯವಾಗಿದೆ ಎಂದು ಹೇಳಿಕೆ ನೀಡಿರುವ ದಾಖಲಾತಿಗಳಿವೆ.

ಕೋಮು ಪ್ರಚೋದನಾಕಾರಿ ಭಾಷಣ ಮಾಡುವುದು ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 125 ಮತ್ತು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಸಾರ್ವಜನಿಕವಾಗಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ