ಕುಖ್ಯಾತ ಭೂಗತ ಪಾತಕಿ ದಾವೂದ್ ಆಸ್ತಿಪಾಸ್ತಿ ಜಪ್ತಿಗೆ ಸುಗಮ ಹಾದಿ:

ನವದೆಹಲಿ, ಏ.20-ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಬಹುಕೋಟಿ ರೂ.ಗಳ ಮುಂಬೈ ಆಸ್ತಿಪಾಸ್ತಿ ಜಪ್ತಿಗೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದ್ದು, ಮುಟ್ಟುಗೋಲಿಗೆ ಹಾದಿ ಸುಗಮವಾಗುವಂಥ ಮಹತ್ವದ ಬೆಳವಣಿಗೆಯೊಂದು ಇಂದು ನಡೆದಿದೆ.
ಸರ್ಕಾರ ತನ್ನ ಆಸ್ತಿಗಳನ್ನು ಜಪ್ತಿ ಮಾಡುವುದರ ವಿರುದ್ಧ ದಾವೂದ್ ತಾಯಿ ಅಮೀನಾ ಬಿ ಕಸ್ಕರ್ ಹಾಗೂ ಸಹೋದರಿ ಹಸೀನಾ ಪಾರ್ಕರ್ ಸಲ್ಲಿಸಿದ್ದ ಅರ್ಜಿಯೊಂದನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್. ಅವು ಭೂಗತ ಪಾತಕಿ ದಾವೂದ್‍ಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ ದಾವೂದ್‍ನ ಅಕ್ರಮ ಆಸ್ತಿ-ಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಹಾದಿ ಸುಗಮವಾಗಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಕೆ.ಅಗರ್‍ವಾಲ್ ಮತ್ತು ಎ.ಎಂ.ಸಪ್ರೆ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ, ಭೂಗತ ಪಾತಕಿಯ ಅಕ್ರಮ ಗಳಿಕೆಯ ಈ ಆಸ್ತಿಗಳನ್ನು ಸರ್ಕಾರ ಜಪ್ತಿ ಮಾಡಿರುವ ಕ್ರಮವನ್ನು ಸಮರ್ಥಿಸಿಕೊಂಡಿತು.
ದಾವೂದ್ ತಾಯಿ ಅಮೀನಾ ಬಿ ಕಸ್ಕರ್ ಹಾಗೂ ಸಹೋದರಿ ಹಸೀನಾ ಪಾರ್ಕರ್(ಇಬ್ಬರೂ ಮೃತಪಟ್ಟಿದ್ದಾರೆ) ಅವರು ಮುಂಬೈನಲ್ಲಿರುವ ತಮ್ಮ ವಸತಿ ಸ್ವತ್ತುಗಳನ್ನು ಜಪ್ತಿ ಮಾಡುವ ಆದೇಶದ ವಿರುದ್ಧ ಈ ಹಿಂದೆಯೇ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟ್ ಇವರ ಅರ್ಜಿಯನ್ನು ವಜಾಗೊಳಿಸಿದ ನಂತರ ಇವರಿಬ್ಬರು ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು.  ಅವರ ಹೆಸರಿನಲ್ಲಿ ಒಟ್ಟು ಏಳು ವಸತಿ ಸ್ವತ್ತುಗಳು ಇದ್ದವು. ಅವರ ತಾಯಿ ಹೆಸರಿನಲ್ಲಿ ಎರಡು ಹಾಗೂ ಸಹೋದರಿ ಹೆಸರಿನಲ್ಲಿ ಐದು ಆಸ್ತಿಗಳು ಇದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ