ಬೆಂಗಳೂರು, ಏ.19-ಹಳೇ ದ್ವೇಷದಿಂದ ಸ್ನೇಹಿತನನ್ನು ಮೊಬೈಲ್ ಕರೆ ಮಾಡಿ ಕರೆಸಿಕೊಂಡು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಕಮಲಾನಗರದ ಶರತ್ಕುಮಾರ್ (22) ಮತ್ತು ರಾಜಾಜಿನಗರದ ವಿನಯ್ (24) ಬಂಧಿತರು.
ಏ.12 ರಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಆರೋಪಿಗಳಾದ ಶರತ್ಕುಮಾರ್, ವಿನಯ್, ಕೃಷ್ಣ ಇತರರು ಸೇರಿಕೊಂಡು ಸ್ನೇಹಿತ ಕೋಟೇಶ್ವರ ಎಂಬುವರಿಗೆ ಮೊಬೈಲ್ ಕರೆ ಮಾಡಿ ಕಾಮಾಕ್ಷಿಪಾಳ್ಯ ತೋಟದ ರಸ್ತೆಯ ಸಣ್ಣಕ್ಕಿ ಬಯಲಿಗೆ ಬರಲು ಹೇಳಿದ್ದಾರೆ.
ಅದರಂತೆ ಕೋಟೇಶ್ವರ ತನ್ನ ಸಹಪಾಠಿಗಳೊಂದಿಗೆ ಈ ಜಾಗಕ್ಕೆ ಬರುತ್ತಿದ್ದಂತೆ ಐದಾರು ಮಂದಿ ಸೇರಿಕೊಂಡು ತಮ್ಮ ದಂಧೆಗೆ ಕೈ ಹಾಕುತ್ತೀಯ ಎಂದು ಮಾರಕಾಸ್ತ್ರಗಳಿಂದ ಮನಬಂದಂತೆ ಹೊಡೆದಿದ್ದಾರೆ.
ಈ ವೇಳೆ ಗಂಭೀರ ಗಾಯಗೊಂಡು ಕೋಟೇಶ್ವರ ಸ್ಥಳದಲ್ಲೇ ಮೃತಪಟ್ಟಿದ್ದನು. ಈತನ ಸಹಪಾಠಿಗಳಾದ ಅಂತೋಣಿ ಕ್ರಿಸ್ಟಿ, ಕುಮಾರ್ ಮತ್ತು ಚಂದ್ರಣ್ಣ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಗಾಯಗೊಂಡಿದ್ದ ಸಹಪಾಠಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ಇವರಿಂದ ಹೇಳಿಕೆ ಪಡೆದು ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಟೇಶ್ವರ ಮತ್ತು ಆರೋಪಿ ಶರತ್ಕುಮಾರ್ ನಡುವೆ ಹಣಕಾಸಿನ ವಿಚಾರದಲ್ಲಿ ಮತ್ತು ಇತರೆ ಅಕ್ರಮ ಚಟುವಟಿಕೆಗಳಲ್ಲಿ ವೈಮನಸ್ಸು ಉಂಟಾಗಿ ಈ ಕೃತ್ಯ ಎಸಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ರವಿಕುಮಾರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.ಮಂಡ್ಯ, ಏ.19- ಸಾರಿಗೆ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸಾವನ್ನಪ್ಪಿ, ಚಾಲಕ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಿಪುರದ ನರಸಿಂಹಶೆಟ್ಟಿ ಮೃತಪಟ್ಟ ಹಿಂಬದಿ ಸವಾರ.
ಕಿರಂಗೂರು ವೃತ್ತದ ಬಳಿ ಕೃಷ್ಣ ಮತ್ತು ನರಸಿಂಹಶೆಟ್ಟಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕೇರಳ ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಹಿಂಬದಿಯಿಂದ ಡಿಕ್ಕಿಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಸವಾರ ನರಸಿಂಹಶೆಟ್ಟಿ ತೀವ್ರಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಮೃತಪಟ್ಟಿದ್ದಾನೆ.
ಚಾಲಕ ಕೃಷ್ಣ ಸಣ್ಣಪುಟ್ಟ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಶ್ರೀರಂಗಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.