ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಬೆನ್ನಲ್ಲೇ ಭಾರತದ ಚುನಾವಣಾ ಆಯೋಗ 224 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 325 ಮಂದಿ ವೀಕ್ಷಕರನ್ನು ನಿಯೋಜಿಸಿದೆ

ಬೆಂಗಳೂರು, ಏ.19-ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಬೆನ್ನಲ್ಲೇ ಭಾರತದ ಚುನಾವಣಾ ಆಯೋಗ 224 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 325 ಮಂದಿ ವೀಕ್ಷಕರನ್ನು ನಿಯೋಜಿಸಿದೆ.

ಚುನಾವಣಾ ಪ್ರಕ್ರಿಯೆ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗ ಮೂರು ವಿಧದ ವೀಕ್ಷಕರನ್ನು ರಾಜ್ಯದಲ್ಲಿ ನಿಯೋಜಿಸಿದೆ.

ಹೊರರಾಜ್ಯಗಳ ಐಎಎಸ್ , ಐಪಿಎಸ್ , ಐಆರ್‍ಎಸ್, ಐಸಿಎಎಸ್, ಐಆರ್‍ಎಎಸ್, ಐಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನಿಯೋಜಿಸಿದೆ.

ಸಾಮಾನ್ಯ ವೀಕ್ಷಕರಾಗಿ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಪ್ರತಿಯೊಬ್ಬರಿಗೂ ವಿಧಾನಸಭಾ ಕ್ಷೇತ್ರವನ್ನು ಆಯೋಗ ಹಂಚಿಕೆ ಮಾಡಿದೆ.

ಒಟ್ಟು 154 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯದ ಚುನಾವಣಾ ಕಾರ್ಯದ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ.

ಅದೇ ರೀತಿ 35 ಐಪಿಎಸ್ ಅಧಿಕಾರಿಗಳನ್ನು ಪೆÇಲೀಸ್ ವೀಕ್ಷಕರನ್ನಾಗಿ ನಿಯೋಜಿಸಿದ್ದು, ಪ್ರತಿಯೊಬ್ಬರಿಗೂ ಕೂಡ ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಿದೆ.

ಅದೇ ರೀತಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಮಾಡುವ ವೆಚ್ಚದ ಮೇಲೆ ನಿಗಾ ಇಡಲು ಚುನಾವಣಾ ವೆಚ್ಚದ ವೀಕ್ಷಕರನ್ನಾಗಿ 136 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಈ ವೀಕ್ಷಕರು ಹೊರರಾಜ್ಯದವರಾಗಿದ್ದು, ಐಆರ್‍ಎಸ್, ಐಸಿಎಸ್, ಐಆರ್‍ಎಎಸ್, ಐಸಿಎಎಸ್ ಅಧಿಕಾರಿಗಳಾಗಿರುತ್ತಾರೆ. ಎಲ್ಲಾ ವೀಕ್ಷಕರು ತಮಗೆ ನಿಗದಿಪಡಿಸಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆ ಮೇಲೆ ನಿಗಾ ಇಟ್ಟು ಚುನಾವಣಾ ಭದ್ರತೆ, ಚುನಾವಣಾ ಪ್ರಚಾರ, ಚುನಾವಣಾ ವೆಚ್ಚಗಳನ್ನು ಪರಿಶೀಲನೆಗೆ ಒಳಪಡಿಸಲಿದ್ದಾರೆ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆ ನಡೆಯಲು ಈ ವೀಕ್ಷಕರು ಕೂಡ ಚುನಾವಣಾಧಿಕಾರಿಗಳ ಮೇಲೆ ನಿಗಾ ಇಟ್ಟು ಕಾರ್ಯ ನಿರ್ವಹಿಸುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ